ಬೆಂಗಳೂರು : ಇಂದು ಸಿಎಂ ಬಿ.ಎಸ್.ಯಡಿಯೂರಪ್ಪನವರು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನಕ್ಕೆ ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಕೊರೊನಾ ವಿರುದ್ಧದ ಸಮರದಲ್ಲಿ ಇದು ಮಹತ್ವದ ದಿನವಾಗಿದೆ ಎಂದರು.
ಕರ್ನಾಟಕದಲ್ಲಿ ಈಗಾಗಲೇ 96.36 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು 100 ರೂ. ಸೇವಾಶುಲ್ಕ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚು ಹಣ ತೆಗೆದುಕೊಂಡಲ್ಲಿ ತೀವ್ರ ಕ್ರಮ ಕೈಗೊಳ್ಳಲಾಗುತ್ತದೆ. ಲಭ್ಯತೆಯ ಆಧಾರದ ಮೇಲೆ ಲಸಿಕೆ ನೀಡುವ ಪ್ರಕ್ರಿಯೆ ನಡೆಯಲಿದೆ. ಹೊರ ದೇಶದಿಂದ ಲಸಿಕೆ ಬರುತ್ತಿದೆ, ಶೀಘ್ರವಾಗಿ ಎಲ್ಲವೂ ಸರಿ ಹೋಗಲಿದೆ. ಇನ್ನೆರಡು ದಿನದಲ್ಲಿ ಎಲ್ಲರ ಅನುಮಾನಕ್ಕೆ ತೆರೆ ಬೀಳಲಿದೆ. ಸದ್ಯ ಇರುವ 4 ಲಕ್ಷ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದಿಂದ 3 ಲಕ್ಷ ಲಸಿಕೆ ಲಭ್ಯವಾಗಿದ್ದು, ರಾಜ್ಯ ಸರ್ಕಾರದ ಬಳಿ ಒಂದು ಲಕ್ಷ ಲಸಿಕೆ ಲಭ್ಯವಿದೆ. ಇದೆಲ್ಲವನ್ನು ಇಂದಿನಿಂದ ಕೊಡಲು ಪ್ರಾರಂಭಿಸಲಾಗುವುದು. ಇದಲ್ಲದೆ 2 ಕೋಟಿ ಲಸಿಕೆ ಖರೀದಿಗೆ ಹಣ ಕೊಟ್ಟಾಗಿದೆ. ರೆಮ್ಡಿಸಿವರ್, ಆಮ್ಲಜನಕವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹವರನ್ನು ಕೆಲಸದಿಂದ ತೆಗೆದುಹಾಕಲಾಗುವುದು. ಸರ್ಕಾರದ ಮಾರ್ಗಸೂಚಿ ಪಾಲಿಸಿ, ಜನರು ಸಹಕಾರ ನೀಡಿದರೆ ಕೋವಿಡ್ ನಿಯಂತ್ರಣ ಸಾಧ್ಯ ಎಂದರು.










