ಪಣಜಿ : ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಬಿಜೆಪಿ ತೆರೆ ಎಳೆದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮೋದ್ ಸಾವಂತ್ ಅವರನ್ನು ಗೋವಾ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಇದೀಗ ಸಾವಂತ್ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ಬಿಜೆಪಿ ಹೈಕಮಾಂಡ್, ವೀಕ್ಷಕರನ್ನಾಗಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್.ಮುರುಗನ್ ಅವರನ್ನು ಗೋವಾಗೆ ಕಳುಹಿಸಿತ್ತು. ನಿನ್ನೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಪ್ರಮೋದ್ ಸಾವಂತ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ.
ಶಾಸಕಾಂಗ ಪಕ್ಷದ ಸಭೆ ಬಳಿಕ ಪ್ರಮೋದ್ ಸಾವಂತ್ ಮಾತನಾಡಿ, ಗೋವಾ ಸಿಎಂ ಆಗಿ ಮುಂದಿನ 5 ವರ್ಷಗಳ ಅವಧಿಗೆ ಕೆಲಸ ಮಾಡುವ ಈ ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಗೋವಾದ ಜನತೆ ನನ್ನನ್ನು ಒಪ್ಪಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ ಎಂದರು.










