ವಿಜಯನಗರ: ಎರಡು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿ ನಡೆದಿದೆ.
ಐಶ್ವರ್ಯ ಮೃತಪಟ್ಟ ಯುವತಿ. ಕೇವಲ 2 ದಿನಗಳಲ್ಲಿ ಯುವತಿ ಅಂತರ್ಜಾತಿ ಯುವಕನನ್ನು ವಿವಾಹವಾಗಲು ತಯಾರಾಗಿದ್ದಳು. ಆದರೆ ಯುವತಿ ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಐಶ್ವರ್ಯ ಹಾಗೂ ವರ ಅಶೋಕ್ ಕಳೆದ 7-8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಬೇರೆ ಬೇರೆ ಜಾತಿಯಾದ್ದರಿಂದ ಮನೆಯವರ ಒಪ್ಪಿಗೆ ಮೇರೆಗೆ ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದರು. ಅಂತರ್ಜಾತಿ ಹಿನ್ನಲೆಯಲ್ಲಿ ಕೆಲವು ಷರತ್ತುಗಳ ಮೇಲೆ ಮದುವೆ ಮಾಡಿಕೊಡಲು ಯುವಕನ ಕಡೆಯವರು ಒಪ್ಪಿದ್ದರು.
ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುತ್ತೇವೆ, ಐಶ್ವರ್ಯಳನ್ನು ಮನೆ ತುಂಬಿಸಿಕೊಳ್ಳುತ್ತೇವೆ ಎಂದು ಹೇಳಿ ಐಶ್ವರ್ಯಾಳನ್ನು ಹುಡುಗನ ಕಡೆಯವರು ಕರೆದುಕೊಂಡು ಹೋಗಿದ್ದರು. ಅಲ್ಲದೆ, ಹುಡುಗಿ ಕಡೆಯವರು ಯಾರೂ ಬರಬಾರದೆಂದು ಷರತ್ತು ಕೂಡ ಹಾಕಿದ್ದರಂತೆ. ಇದೀಗ ದಿಢೀರನೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಯುವತಿಯ ಪೋಷಕರು, ನಮಗೂ ಅವರಿಗೂ ಹೊಂದಾಣಿಕೆ ಆಗಲ್ಲ, ನಾನು ಈ ಮದುವೆ ಬೇಡ ಎಂದು ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ ಮನಸ್ಸಿನವಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಯುವಕನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.










