20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್-ಸಾಮಾಜಿಕ ಮೂಲ ಸೌಕರ್ಯ ವಲಯಕ್ಕೆ 8,100 ಕೋಟಿ ರೂ. ಮೀಸಲು…

141
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ 3 ದಿನಗಳಿಂದ ಹಂತ ಹಂತವಾಗಿ ಪ್ಯಾಕೇಜ್ ಕುರಿತು ವಿವರಣೆ ನೀಡುತ್ತಿದ್ದು, ಈಗಾಗಲೇ ವಲಸೆ ಕಾರ್ಮಿಕರು, ಬಡವರು, ಮೀನುಗಾರರು, ಸಣ್ಣ ರೈತರು, ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು, ರೈತರು ಸೇರಿದಂತೆ ಹಲವು ಕೈಗಾರಿಕ ವಲಯಗಳಿಗೆ ನೆರವು ಘೋಷಿಸಿದ್ದು, ಇಂದು ಬಾಕಿ ಉಳಿದಿರುವ 2 ಲಕ್ಷ ಕೋಟಿ ಪ್ಯಾಕೇಜ್ ಕುರಿತು ನಿರ್ಮಲಾ ಸೀತಾರಾಮನ್ ಅವರು ವಿವರಣೆ ನೀಡಿದ್ದಾರೆ.
ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ನಮ್ಮ ಪ್ಯಾಕೇಜ್ ನೆರವಾಗಲಿದ್ದು, ಬಹುತೇಕ ವಲಯಗಳಲ್ಲಿ ನೀತಿಗಳನ್ನು ಸಡಿಲಿಕೆ ಮಾಡಿದ್ದೇವೆ. ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಕ್ರಮಗಳನ್ನು ಕೈಗೊಂಡಿದ್ದೇವೆ. ಹೂಡಿಕೆಗಳಿಗೆ ಉತ್ತೇಜನ ನೀಡಲು ನೆರವು ನೀಡಿದ್ದೇವೆ ಎಂದು ತಿಳಿಸಿದರು.
ನಾವು ಇಂದು ಪ್ರಮುಖ 8 ವಲಯಗಳಿಗೆ ನೆರವನ್ನು ಘೋಷಣೆ ಮಾಡಲಿದ್ದು, ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ಖನಿಜ ಸಂಪತ್ತು, ಅಣುಶಕ್ತಿ, ಇಂಧನ ಪೂರೈಕೆ, ಬಾಹ್ಯಾಕಾಶ, ಕಲ್ಲಿದ್ದಲು, ರಕ್ಷಣಾ ವಲಯ, ವೈಮಾನಿಕ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಧನ ಪೂರೈಕೆ ಕಂಪನಿ ಈ 8 ವಲಯಗಳ ಸುಧಾರಣೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಬಳಿ 5 ಲಕ್ಷ ಹೆಕ್ಟೇರ್ ಕೈಗಾರಿಕಾ ಭೂಮಿ ಲಭ್ಯವಿದೆ. ದೇಶದಲ್ಲಿ ಪ್ರಸ್ತುತ 3,376 ಕೈಗಾರಿಕಾ ಭೂಮಿಗಳಿವೆ. ಇವುಗಳಿಗೆ ರ್ಯಾಂಕಿಂಗ್ ಮಾಡಲಾಗುವುದು.
ಭಾರತ ವಿಶ್ವದಲ್ಲೇ ಕಲ್ಲಿದ್ದಲು ಸಂಪತ್ತು ಹೊಂದಿರುವ 3ನೇ ರಾಷ್ಟ್ರವಾಗಿದೆ. ಕಲ್ಲಿದ್ದಲು ಆಮದು ಕಡಿಮೆ ಮಾಡಿ ದೇಶದಲ್ಲೇ ಹೆಚ್ಚು ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು. ಕಲ್ಲಿದ್ದಲು ವಲಯಕ್ಕೆ 50 ಸಾವಿರ ಕೋಟಿ ರೂ ಹಣವನ್ನು ಹೂಡಿಕೆ ಮಾಡಲಾಗುವುದು. ಕಲ್ಲಿದ್ದಲು ಗಣಿಗಳನ್ನು ಯಾರು ಬೇಕಾದರೂ ಖರೀದಿಸಬಹುದು. ಮುಂಗಡವಾಗಿ ಹಣ ನೀಡುವವರಿಗೆ ಗಣಿ ಹಂಚಿಕೆ ಮಾಡಲಾಗುವುದು. ಇದಕ್ಕೆ ಯಾವುದೇ ರೀತಿಯ ಷರತ್ತು, ಅರ್ಹತೆ ಇರುವುದಿಲ್ಲ.
ರಕ್ಷಣಾ ಸಾಮಾಗ್ರಿಗಳ ಉತ್ಪಾದನೆ ಹಾಗೂ ಖರೀದಿಗೆ ದೇಶದಲ್ಲೆ ಆಧ್ಯತೆ ನೀಡಲಾಗುವುದು. ಕೆಲವು ಶಸ್ತ್ರಾಸ್ತ್ರ, ಉಪಕರಣಗಳ ಆಮದು ರದ್ದುಗೊಳಿಸಲಾಗುವುದು. ಮೇಕ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
ಖನಿಜ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಖಾಸಗಿ ಹೂಡಿಕೆಯನ್ನು ಹೆಚ್ಚಳಗೊಳಿಸಲಾಗುವುದು. 500 ಗಣಿಗಾರಿಕೆ ಕೇಂದ್ರಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಮೂಲ ಸೌಕರ್ಯ ವಲಯಕ್ಕೆ ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ 8,100 ಕೋಟಿ ಮೀಸಲಿಡಲಾಗಿದೆ.
ವಿಮಾನಯಾನಕ್ಕಿದ್ದ ನಿರ್ಬಂಧಗಳನ್ನು ರದ್ದು ಮಾಡಲಾಗಿದ್ದು, 6 ವಿಮಾನ ನಿಲ್ದಾಣಗಳ ಹರಾಜಿಗೆ ನಿರ್ಧಾರ ಮಾಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವ, ಏರ್‍ಕ್ರಾಫ್ಟ್ ನಿರ್ವಹಣೆ ಹಾಗೂ ದುರಸ್ಥೆಯಲ್ಲಿ ಭಾರತ ಜಾಗತಿಕ ಹಬ್ ಆಗಲಿದೆ.