ಜೈಪುರ : ನಿನ್ನೆ ರಾಜ್ಯ ಬಜೆಟ್ ಮಂಡನೆ ಮಾಡಿದ ಬಳಿಕ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ 200 ಶಾಸಕರಿಗೆ ಐಫೋನ್ 13 ಗಳನ್ನು ಉಡುಗೊರೆಯಾಗಿ ನೀಡಿತ್ತು. ಆದರೆ ಬಿಜೆಪಿ ಶಾಸಕರು ತಮಗೆ ನೀಡಲಾದ ಐಫೋನ್ನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ. ಒಂದು ಐಫೋನ್ ನ ಬೆಲೆ 70 ಸಾವಿರ ರೂಪಾಯಿ ಇರುತ್ತದೆ. ಇದು ರಾಜ್ಯಕ್ಕೆ ಆರ್ಥಿಕ ಹೊರೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪೂಂಜಾ, ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ಉಪನಾಯಕ (ಬಿಜೆಪಿ ನಾಯಕ) ರಾಜೇಂದ್ರ ಜೀ ಮತ್ತು ರಾಜಸ್ಥಾನ ಮಾಜಿ ಗೃಹಸಚಿವ, ಬಿಜೆಪಿ ಹಿರಿಯ ಮುಖಂಡ ಗುಲಾಬ್ ಚಾಂದ್ ಕಟಾರಿಯಾ ಅವರೊಂದಿಗೆ ಚರ್ಚೆ ನಡೆಸಿ, ಐಫೋನ್ಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದೇವೆ. ರಾಜ್ಯಕ್ಕೆ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಶಾಸಕರಿಗೆ ದುಬಾರಿ ಉಡುಗೊರೆ ಕೊಡುತ್ತಿರುವುದು ಇದೇ ಮೊದಲೇನಲ್ಲ. 2021ರ ಬಜೆಟ್ ಮಂಡನೆಯ ಬಳಿಕ 200 ಶಾಸಕರಿಗೆ ಐ ಪ್ಯಾಡ್ ಗಳನ್ನು ನೀಡಿತ್ತು.










