2000 ರೂ. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳನ್ನು ಹಿಂಪಡೆಯಲು ಮುಂದಾದ ಆರ್‌ಬಿಐ.

38
firstsuddi

ನವದೆಹಲಿ: 2000 ರೂ. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳು, ಬಿಡುಗಡೆಯಾದ ಕೇವಲ 7 ವರ್ಷದಲ್ಲಿ ಅಂತ್ಯದ ಹಾದಿ ಹಿಡಿದಿದೆ. ದೇಶಾದ್ಯಂತ ಕಪ್ಪುಹಣ ಹೆಚ್ಚಾಗಿತ್ತು. ಜೊತೆಗೆ ಶತ್ರು ದೇಶಗಳು ಭಾರೀ ಪ್ರಮಾಣದ ನಕಲಿ ನೋಟುಗಳನ್ನು ಮುದ್ರಿಸಿ ದೇಶದಲ್ಲಿ ಚಲಾವಣೆಗೆ ಬಿಡುತ್ತಿದ್ದವು. ಆರ್ಥಿಕತೆ ಚೇತರಿಕೆ ಹಾದಿಯಲ್ಲಿದ್ದ ಕಾರಣ, ಹೆಚ್ಚಿನ ಪ್ರಮಾಣದ ನಗದಿನ ಅವಶ್ಯಕತೆ ಕಂಡುಬಂದಿತ್ತು. ಈ ಎಲ್ಲಾ ಕಾರಣಕ್ಕಾಗಿ ಕೇಂದ್ರ ಸರ್ಕಾರ 7 ವರ್ಷಗಳ ಹಿಂದೆ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ, 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಹೀಗೆ ಉದ್ದೇಶಿಸಿ ಗುರಿ ಸಾಧನೆ ಬಳಿಕ ಇದೀಗ ಕೇಂದ್ರ ಸರ್ಕಾರ, ಗುಲಾಬಿ ಬಣ್ಣದ ನೋಟುಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದೆ.

ಮಹತ್ವದ ಬೆಳವಣಿಗೆಯಲ್ಲಿ ʼಕ್ಲೀನ್ ನೋಟ್ʼ ನೀತಿಯ ಅಡಿ 2000 ರೂ. ನೋಟುಗಳ ಚಲಾವಣೆಯನ್ನು ಅಕ್ಟೋಬರ್ 1ರಿಂದ ಸಂಪೂರ್ಣವಾಗಿ ಸ್ಥಗಿತ ಮಾಡುವುದಾಗಿ ಆರ್‌ಬಿಐ ಪ್ರಕಟಿಸಿದೆ. 2019-20ರ ಆರ್ಥಿಕ ವರ್ಷದಿಂದ 2000 ರೂ. ನೋಟು ಮುದ್ರಣ ಸಂಪೂರ್ಣ ಸ್ಥಗಿತವಾಗಿತ್ತು. ಅಷ್ಟೇ ಅಲ್ಲದೇ ಎಟಿಎಂಗಳಲ್ಲೂ ಈ ನೋಟು ಲಭ್ಯವಿರುತ್ತಿರಲಿಲ್ಲ.

ನೋಟಿನ ಕುರಿತ ಪ್ರಶ್ನೆಗೆ ಇಲ್ಲಿದೆ ಉತ್ತರ:
1. 2000 ರೂ. ನೋಟು ವಾಪಸ್ ಯಾಕೆ?
ಆರ್‌ಬಿಐ 2 ಸಾವಿರ ರೂ. ನೋಟನ್ನು ವಾಪಸ್ ಪಡೆದಿದೆಯೇ ಹೊರತು ನಿಷೇಧ ಮಾಡಿಲ್ಲ. ಭಾರೀ ಹಗರಣ ಮತ್ತು ನಕಲಿ ನೋಟುಗಳ ಹಾವಳಿ ತಡೆಯಲು ಈ ನಿರ್ಧಾರ ಮಾಡಲಾಗಿದೆ. ಬಡವರು, ಶ್ರೀಸಾಮಾನ್ಯರು ಹೆಚ್ಚಾಗಿ ಈ ಹಣವನ್ನು ಬಳಸುತ್ತಿಲ್ಲ.

2. 2000 ರೂ.ಗೆ ಕಾನೂನಿನ ಮಾನ್ಯತೆ ಇದೆಯೇ?
ಸೆಪ್ಟೆಂಬರ್ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ.

3. ಸಾಮಾನ್ಯ ವ್ಯವಹಾರಗಳಿಗೆ ಬಳಕೆ ಮಾಡಬಹುದೇ?
2000 ರೂ. ನೋಟು ಬಳಕೆಗೆ ಸಂಪೂರ್ಣ ನಿಷೇಧ ಹೇರಿಲ್ಲ. ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಬಳಕೆ ಮಾಡಬಹುದು.

4. ನೋಟು ಇರುವವರು ಏನು ಮಾಡಬೇಕು?
1 ದಿನಕ್ಕೆ ಗರಿಷ್ಠ 20 ಸಾವಿರ ರೂ.ನಂತೆ ಬ್ಯಾಂಕಲ್ಲಿ ಬದಲಾಯಿಸಬಹುದು.

5. ನೋಟು ಬದಲಾವಣೆಗೆ ಕಾಲಮಿತಿ ಇದೆಯೇ?
ಸದ್ಯಕ್ಕೆ ಆರ್‌ಬಿಐ ಸೆ.30ರವರೆಗೆ ಸಮಯಾವಕಾಶವನ್ನು ನೀಡಿದೆ.

6. ಯಾವಾಗಿನಿಂದ ನೋಟು ಬದಲಾವಣೆ ಮಾಡಬಹುದು?
ಮೇ.23ರಿಂದ ಸೆಪ್ಟೆಂಬರ್ 30ರವರೆಗೂ ಎಲ್ಲಾ ಬ್ಯಾಂಕು, ಆರ್‌ಬಿಐ ಶಾಖೆಗಳಲ್ಲಿ ಬದಲಾವಣೆ ಮಾಡಬಹುದು.

7. ನೋಟು ಬದಲಾವಣೆಗೆ ಬ್ಯಾಂಕ್‌ನಲ್ಲಿ ಅಕೌಂಟ್ ಇರಬೇಕೆ?
ಇಲ್ಲ. ಖಾತೆ ಇಲ್ಲದಿದ್ದರೂ ನೋಟು ಬದಲಾವಣೆ ಮಾಡಿಕೊಳ್ಳಬಹುದು.

8. 20 ಸಾವಿರಕ್ಕಿಂತ ಹೆಚ್ಚು ಹಣ ಬೇಕಿದ್ದರೆ ಏನು ಮಾಡಬೇಕು?
20 ಸಾವಿರ ರೂ.ಗಿಂತಲೂ ಜಾಸ್ತಿ ಹಣ ಇದ್ದರೂ ಯಾವುದೇ ಸಮಸ್ಯೆ ಇಲ್ಲ. ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಠೇವಣಿ ಇಡಬಹುದು. ಠೇವಣಿಗೆ ಯಾವುದೇ ಮಿತಿಯನ್ನು ಹೇರಿಲ್ಲ. ಆದರೆ ಕೆವೈಸಿ ಮತ್ತು ಇತರೇ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

9. ಬದಲಾವಣೆಗೆ ಶುಲ್ಕ ಪಾವತಿಸಬೇಕೇ?
ಬದಲಾವಣೆಗೆ ಶುಲ್ಕ ಇಲ್ಲ. ಉಚಿತವಾಗಿ ಸೌಲಭ್ಯ ಪಡೆದುಕೊಳ್ಳಬಹುದು.

10. ಬ್ಯಾಂಕುಗಳು ತಿರಸ್ಕರಿಸಿದರೆ ಏನು ಮಾಡುವುದು?
ಬದಲಾವಣೆ ಮಾಡಿಕೊಡುವುದು ಕಡ್ಡಾಯ. ತಿರಸ್ಕರಿಸಿದರೆ ಆರ್‌ಬಿಐಗೆ ದೂರು ನೀಡಬಹುದು.

11. ನೋಟು ನಿಷೇಧಕ್ಕೂ, ಹಿಂತೆಗೆದುಕೊಳ್ಳುವುದಕ್ಕೂ ವ್ಯತ್ಯಾಸ ಏನು?
2016ರ ಸೆ.8 ರಂದು 500, 1000 ರೂ. ನೋಟುಗಳ ಬಳಕೆಗೆ ನಿಷೇಧ ಹೇರಲಾಗಿತ್ತು. ಅಂದರೆ 1000, 500 ರೂ. ಕಾನೂನಿನ ಮಾನ್ಯತೆ ರದ್ದಾಗಿತ್ತು. ಆದರೆ ಇಲ್ಲಿ ದಿಢೀರ್ 2000 ರೂ. ರದ್ದಾಗಿಲ್ಲ. ಸೆ.30ರವರೆಗೂ ಬದಲಾಯಿಸಿಕೊಳ್ಳಲು ಅವಕಾಶವಿದೆ.