2022ರ ವೇಳೆಗೆ ಪ್ರತಿಯೊಬ್ಬ ಬಡವರಿಗೂ ಶಾಶ್ವತ ಮನೆ ನೀಡಲಾಗುವುದು : ನರೇಂದ್ರ ಮೋದಿ

377
firstsuddi

ನವದೆಹಲಿ : ಇಂದು 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣಕ್ಕೂ ಮೊದಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾದಿಗೆ ತೆರಳಿ ಪೂಜೆ ಸಲ್ಲಿಸಿ ಬಳಿಕ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ 73ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು. ನಮ್ಮ ದೇಶದಲ್ಲಿರುವ ಬಡತನವನ್ನು ಮತ್ತು ಬಡವರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ವತಿಯಿಂದ 2022ರ ವೇಳೆಗೆ ಪ್ರತಿಯೊಬ್ಬ ಬಡವರಿಗೂ ಶಾಶ್ವತ ಮನೆ ನೀಡಲಾಗುವುದು. 100 ಲಕ್ಷ ಕೋಟಿ ರೂ.ಅನ್ನು ಮೂಲ ಸೌಕರ್ಯಕ್ಕೆ ಹಾಗೂ ಜಲ ಜೀವನ್ ಮಿಷನ್ ಯೋಜನೆಗೆ 3.5 ಲಕ್ಷ ಕೋಟಿ ರೂ.ಅನ್ನು ಮೀಸಲಿಡಲಾಗಿದೆ. ಜಲ ಜೀವನ್ ಮಿಷನ್ ಯೋಜನೆಯಿಂದ ನೀರಿಗಾಗಿ ಕಿಲೋ ಮೀಟರ್ ಗಟ್ಟಲೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ನಾವು ರಾಸಾಯನಿಕ ಗೊಬ್ಬರಗಳನ್ನು ಬಳಸುವುದನ್ನು ನಿಲ್ಲಿಸಬೇಕು. ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಭೂತಾಯಿಗೆ ನೋವುಂಟುಮಾಡುತ್ತಿದ್ದೇವೆ. ಹಾಗೂ ಭೂತಾಯಿಯನ್ನು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿದ್ದೇವೆ. ನಾವು ಜಿಎಸ್‍ಟಿ ಜಾರಿಗೆ ತಂದಿದ್ದರಿಂದ ಒಂದು ದೇಶ ಒಂದು ತೆರಿಗೆ ಸಾಕಾರವಾಯಿತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಮತ್ತು 35(ಎ) ನ್ನು ರದ್ದುಗೊಳಿಸಿದ್ದೇವೆ. 70 ವರ್ಷದಿಂದ ಆಗದೇ ಇರುವುದನ್ನು ನಾವು 70 ದಿನದಲ್ಲಿ ಮಾಡಿದ್ದೇವೆ. ಇದರಲ್ಲಿ ನನ್ನ ಸ್ವಂತದ್ದು ಅಂತ ಯಾವುದು ಇಲ್ಲ. ಆರ್ಟಿಕಲ್ 370 ರದ್ದುಗೊಳಿಸುವ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ನಮಗೆ ಬೆಂಬಲಿಸಿದವು. ಆದರೆ ಇನ್ನು ಕೆಲ ರಾಜಕೀಯ ಪಕ್ಷಗಳು ವಿರೋಧಿಸುತ್ತಿದೆ. ನನಗಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. ನಾವು ಸಮಸ್ಯೆಗಳನ್ನು ಸಾಕುವುದಿಲ್ಲ ಹಾಗೂ ದೂರ ತಳ್ಳುವುದೂ ಇಲ್ಲ. ಬದಲಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ತ್ರಿವಳಿ ತಲಾಖ್‍ನಿಂದ ದೇಶದಲ್ಲಿರುವ ಮುಸ್ಲಿಂ ಸಹೋದರಿಯರು ಭಯದ ಜೀವನ ಸಾಗಿಸುತ್ತಿದ್ದರು. ತ್ರಿವಳಿ ತಲಾಖ್ ಮಸೂದೆಯಿಂದ ಭಯ ದೂರವಾಗಿ ಮಹಳೆಯರಿಗೆ ಸಮಾನ ಅಧಿಕಾರ ದೊರೆತಂತಾಗಿದೆ. ನಮ್ಮ ದೇಶವು ಬದಲಾವಣೆ ಕಾಣುತ್ತಿದೆ ಹಾಗು ಅಭಿವೃದ್ದಿಯಾಗುತ್ತಿದೆ ಎಂದು ಸಾಮಾನ್ಯ ವ್ಯಕ್ತಿಗಳು ಕೂಡಾ ಹೇಳುತ್ತಿದ್ದಾರೆ. 130 ಕೋಟಿ ಜನರ ಮುಖದ ಮೇಲಿನ ಉತ್ಸಾಹ ನನಗೆ ಹೊಸ ಶಕ್ತಿಯನ್ನು ತಂದಿದೆ. ಹಾಗೂ ಸ್ವಾತಂತ್ರ ಸಂದರ್ಭದಲ್ಲಿ ದೇಶದ ಹಲವೆಡೆ ಪ್ರವಾಹದಿಂದ ಭಾರಿ ಹಾನಿಯುಂಟಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂತ್ರಸ್ತರ ಅಭಿವೃದ್ದಿಗೆ ಶ್ರಮಿಸಲಿದೆ.
ನಮ್ಮ ದೇಶದಲ್ಲಿ ಪ್ರವಾಸಿ ತಾಣಗಳ ಅಭಿವೃದ್ದಿಯಾದರೆ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ. ನಮ್ಮ ನಮ್ಮ ದೇಶದಿಂದ ಲಕ್ಷಾಂತರ ಜನರು ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಆದರೆ ಅವರಲ್ಲಿ ಸಾಕಷ್ಟು ಜನರು ನಮ್ಮಲ್ಲೇ ಇರುವ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವುದೇ ಇಲ್ಲ. ಹೀಗಾಗಿ 2022ರ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ದೇಶದಲ್ಲಿರುವ ಎಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ಮಾಡುವುದಾಗಿ ಸಂಕಲ್ಪ ಮಾಡೋಣ. ಎಲ್ಲಿ ನೀವು ಪ್ರವಾಸಕ್ಕೆ ಹೋಗುತ್ತಿರೋ ಅಲ್ಲಿ ಹೊಸ ಜಗತ್ತು ನಿರ್ಮಿಸಬಹುದು. ಭಾರತೀಯರು ಹೋಗುವ ಸ್ಥಳಗಳಿಗೆ ವಿದೇಶಿಯರು ಕೂಡ ಬರುತ್ತಾರೆ. ಈ ಮೂಲಕ ನಮ್ಮ ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಮನವಿ ಮಾಡಿಕೊಂಡರು.
ದೇಶಾದ್ಯಂತ ಎಲ್ಲರೂ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಕೂಡಲೇ ನಾವು ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಬೇಕಾಗಿದೆ. ಪ್ಲಾಸ್ಟಿಕ್ ಬ್ಯಾಗ್ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾಗ್‍ಗಳನ್ನು ಬಳಸಬೇಕು. ದೇಶದ ಅಭಿವೃದ್ದಿಗಾಗಿ ಶಾಂತಿ ಮತ್ತು ಸುರಕ್ಷತೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸೈನಿಕರಿಗೆ ಹಾಗೂ ಭದ್ರತಾ ಪಡೆಗೆ ನನ್ನ ನಮನ. ಭೂ, ವಾಯು ಹಾಗೂ ನೌಕಾ ಪಡೆಗಳ ಮಧ್ಯೆ ಸಮನ್ವಯತೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ನೇಮಕ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಐತಿಹಾಸಿದ ಘೋಷಣೆ ಮಾಡಿದ್ದಾರೆ. ಅಲ್ಲದೇ ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ನಮ್ಮ ತ್ರಿವರ್ಣ ಧ್ವಜ ಹಾರಲಿದೆ ಎಂದರು.