ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಕರ್ವಾಲ್ ಖೇರಿಯಲ್ಲಿ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ ಯನ್ನು ಉದ್ಘಾಟಿಸಿದ್ದಾರೆ.
ವಾಯುಪಡೆಯ ಸಿ- 130ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಬಂದಿಳಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇಯನ್ನು ಅವರು ಉದ್ಘಾಟಿಸಿದ್ದಾರೆ. ಇದಾದ ಬಳಿಕ ಸುಲ್ತಾನ್ ಪುರ ಜಿಲ್ಲೆಯ ಎಕ್ಸ್ ಪ್ರೆಸ್ ವೇಯಲ್ಲಿ ನಿರ್ಮಿಸಲಾದ 3.2 ಕಿಮೀ ಉದ್ದದ ಏರ್ ಸ್ಟ್ರಿಪ್ ನಲ್ಲಿ ಭಾರತೀಯ ವಾಯುಪಡೆಯ ವಿಮಾನಗಳ ವೈಮಾನಿಕ ಪ್ರದರ್ಶನಕ್ಕೂ ಸಾಕ್ಷಿಯಾಗಲಿದ್ದಾರೆ.
ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ತುರ್ತು ಸಂದರ್ಭಗಳಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲು ಅನುಕೂಲವಾಗುವಂತೆ ಪೂರ್ವಾಂಚಲ್ ಎಕ್ಸ್ಪ್ರೆಸ್ ವೇ ನಿರ್ಮಿಸಲಾಗಿದ್ದು, ಬರೋಬ್ಬರಿ 22,500 ಕೋಟಿ ರೂಪಾಯಿ ವೆಚ್ಚದೊಂದಿಗೆ 36 ತಿಂಗಳುಗಳ ಅವಧಿಯಲ್ಲಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ.
341 ಕಿಲೋಮೀಟರ್ ಉದ್ದದ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ ಲಖನೌ-ಸುಲ್ತಾನ್ಪುರ ರಸ್ತೆಯಲ್ಲಿ (ಓಊ-731) ಲಖನೌ ಜಿಲ್ಲೆಯ ಚೌದ್ಸರೈ ಗ್ರಾಮದಿಂದ ಪ್ರಾರಂಭವಾಗುತ್ತದೆ. ಉತ್ತರ ಪ್ರದೇಶ-ಬಿಹಾರ ಗಡಿಯಿಂದ ಪೂರ್ವಕ್ಕೆ 18 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 31 ರಲ್ಲಿರುವ ಹೈದರಿಯಾ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.
ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ 22 ಫ್ಲೈಓವರ್ ಗಳು, 7 ರೈಲ್ವೆ-ಓವರ್-ಬ್ರಿಡ್ಜ್ ಗಳು, 7 ಪ್ರಮುಖ ಸೇತುವೆಗಳು, 114 ಸಣ್ಣ ಸೇತುವೆಗಳು, 6 ಟೋಲ್ ಪ್ಲಾಜಾಗಳು, 45 ವಾಹನ-ಅಂಡರ್ ಪಾಸ್ ಗಳು , 139 ಲೈಟ್, 87 ಪಾದಚಾರಿ ಅಂಡರ್ ಪಾಸ್ ಮತ್ತು 525 ಬಾಕ್ಸ್ ಕಲ್ವರ್ಟ್ ಗಳನ್ನು ಹೊಂದಿರುತ್ತದೆ. ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಸಿಎನ್‌ಜಿ ಸ್ಟೇಷನ್ ಗಳು, ವಾಹನಗಳಿಗೆ ಎಲೆಕ್ಟ್ರಿಕ್ ರೀಚಾರ್ಜ್ ಕೇಂದ್ರಗಳನ್ನು ಹೊಂದಿದೆ. ಈ ಹೈವೇಯಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಾಹನಗಳ ವೇಗವನ್ನು ಗಂಟೆಗೆ 100 ಕಿಮೀ ಎಂದು ನಿಗದಿಪಡಿಸಲಾಗಿದೆ.










