ಮಂಡ್ಯ: ತಡೆಗೋಡೆ ಇಲ್ಲದ ಕಾರಣ ಜಿಲ್ಲೆಯ ವಿಸಿ ನಾಲೆಯಲ್ಲಿ ಕಾರೊಂದು ಉರುಳಿ ಬಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅವ್ವೇರಹಳ್ಳಿ ಗ್ರಾಮದ ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ನಾಲೆಗೆ ಸ್ವಿಫ್ಟ್ ಕಾರು ಉರುಳಿದೆ. ಇದರಿಂದ ಕಾರು ಸಂಪೂರ್ಣ ಜಖಂ ಆಗಿದೆ. ಈ ಪರಿಣಾಮ ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಮೃತ ಹಾಗೂ ಗಾಯಗೊಂಡ ವ್ಯಕ್ತಿಯ ವಿಳಾಸ ಇನ್ನೂ ತಿಳಿದು ಬಂದಿಲ್ಲ.
ಗಾಯಗೊಂಡ ವ್ಯಕ್ತಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸಿ ನಾಲೆಯ ಹಲವು ಕಡೆ ತಡೆಗೋಡೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ಜರುಗುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಿದ್ದರೂ ಸಹ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.










