4 ದಿನದ ಹಿಂದೆ ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ…

46
firstsuddi

ಕೋಲ್ಕತ್ತಾ : 4 ದಿನದ ಹಿಂದಷ್ಟೇ ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದ ಕುಮಾರ್ ಗಂಜ್ ನಿಲ್ದಾಣದ ಬಳಿ ನಡೆದಿದೆ. ಕಲ್ಲು ತೂರಾಟದ ಪರಿಣಾಮವಾಗಿ ರೈಲಿನ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ.

ಶುಕ್ರವಾರವಷ್ಟೇ ಆನ್ ಲೈನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲ್ಪೈಗುರಿ ಜಂಕ್ಷನ್ ಗೆ ಹೋಗುವ ಭಾರತದ 7ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಚಾಲನೆ ನೀಡಿದ್ದರು. ಇದಾದ 4 ದಿನದ ನಂತರ ಈ ಘಟನೆ ನಡೆದಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೂರ್ವ ರೈಲ್ವೇಸ್, ಮಂಗಳವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಇದರ ಪರಿಣಾಮವಾಗಿ ಬಾಗಿಲಿನ ಗಾಜು ಬಿರುಕು ಬಿಟ್ಟಿತ್ತು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ತೊಂದರೆ ಆಗಲಿಲ್ಲ ಎಂದರು.

ಯಾವ ಉದ್ದೇಶಕ್ಕಾಗಿ ಕಲ್ಲು ಎಸೆದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಡೀ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದರು.