
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ 2 ದಿನಗಳ ಕಾಲ ಕುವೈತ್ ಪ್ರವಾಸ ಕೈಗೊಂಡಿದ್ದಾರೆ. ದ್ವಿಪಕ್ಷೀಯ ಸಂಬಂಧ ಮತ್ತು ಇಂಧನ ಸಹಕಾರ ವೃದ್ಧಿಗಾಗಿ ಮೋದಿ ಕುವೈತ್‍ಗೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಈ ಮೂಲಕ 43 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಗಲ್ಫ್ ರಾಷ್ಟ್ರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಕುವೈತ್‍ನಲ್ಲಿಂದು ನಡೆಯುವ ʻಹಾಲಾ ಮೋದಿ ಮೆಗಾ ಡಯಾಸ್ಪೊರಾ ಕಾರ್ಯಕ್ರಮಕ್ಕೆ ಈಗಾಗಲೇ ವೇದಿಕೆ ಸಿದ್ಧಪಡಿಸಲಾಗಿದೆ. ಸುಮಾರು 5,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಈ ಕುರಿತು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಅರಣು ಕುಮಾರ್ ಚಟರ್ಜಿ ಮಾಹಿತಿ ನೀಡಿದ್ದಾರೆ. ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಸಂಬಂಧ ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಮೋದಿ ಭೇಟಿ ನೀಡುತ್ತಿದ್ದಾರೆ. ಮೊದಲು ಬಯಾನ್ ಅರಮನೆಯಲ್ಲಿ ಗೌರವಾನ್ವಿತ ಗೌರವ ಸ್ವೀಕರಿಸಲಿದ್ದಾರೆ. ಬಳಿಕ ಕುವೈತ್ ನಾಯಕತ್ವದೊಂದಿಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ಸಂಸ್ಕøತಿ ಮತ್ತು ಜನರ ನಡುವಿನ ಸಂಬಂಧಗಳು ಹಾಗೂ ಇದಕ್ಕಾಗಿ ಉಭಯ ರಾಷ್ಟ್ರಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ನಂತರ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.









