5 ವರ್ಷಗಳ ಬಳಿಕ ಬಡ್ಡಿದರ ಕಡಿತ ಮಾಡಿದ ಆರ್‌ಬಿಐ .

24

ಮುಂಬೈ: ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಭಾರತೀಯ ರಿಸರ್ವ ಬ್ಯಾಂಕ್ ಸುಮಾರು 5 ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರವನ್ನು ಕಡಿತಗೊಳಿಸಿದೆ. ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಭಾರತೀಯ ರಿಸರ್ವ ಬ್ಯಾಂಕ್ ಈ ಮಹತ್ವದ ಕ್ರಮಕೈಗೊಂಡಿದೆ. ಮೇ 2020ರಲ್ಲಿ ಕೊನೆ ಬಾರಿಗೆ ರೆಪೋರೇಟ್ ಕಡಿತದ ಬಳಿಕ, ಇದೇ ಮೊದಲ ಬಾರಿಗೆ 25 ಬೇಸಿಸ್ ಪಾಯಿಂಟ್‍ಗಳನ್ನು ಕಡಿತಗೊಳಿಸಲಾಗಿದೆ. ಫೆ.2023ರಲ್ಲಿ 25 ಬೇಸಿಸ್ ಪಾಯಿಂಟ್ ಏರಿಕೆಯೊಂದಿಗೆ ಶೇ.6.5ಕ್ಕೆ ಹೆಚ್ಚಿಸಲಾಗಿತ್ತು. ವಿತ್ತೀಯ ನೀತಿ ಸಮಿತಿ ಎಮ್‍ಪಿಸಿ ಸರ್ವಾನುಮತದಿಂದ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‍ಗಳು ಎಂದರೆ, ಶೇಕಡಾ 6.50 ರಿಂದ 6.25 ಶೇಕಡಾಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಸಂಜಯ್ ಮಲ್ಹೋತ್ರಾ ಪ್ರಕಟಿಸಿದರು. ಕೇಂದ್ರ ಬಜೆಟ್‍ನಲ್ಲಿ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಕ್ರಮಗಳನ್ನು ಪ್ರಕಟಿಸಿರುವುದರಿಂದ ಆರ್‌ಬಿಐ ದರ ಕಡಿತಗೊಳಿಸುವುದು ನಿಶ್ಷಿತ ಎಂಬ ಸುಳಿವು ಸಿಕ್ಕಿತ್ತು. ಆ ನಿರೀಕ್ಷೆ ಈಗ ನಿಜವಾಗಿದೆ. ಆರ್‌ಬಿಐ ನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ತಮ್ಮ ಮೊದಲ ಹಣಕಾಸು ನೀತಿಯನ್ನು ಇಂದು ಪ್ರಕಟಿಸುವ ಮೂಲಕ ತಮ್ಮ ಅಧಿಕಾರವಧಿಗೆ ಆರಂಭಿಕ ಮುದ್ರೆ ಒತ್ತಿದ್ದಾರೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟು ಆರ್ಥಿಕ ಬೆಳವಣಿಗೆಗೆ ಬೆಂಬಲಿಸಲು ಕೇಂದ್ರ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‍ಗಳಿಂದ ಕಡಿತಗೊಳಿಸಿದೆ.