ನವದೆಹಲಿ : ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು 10 ಲಕ್ಷ ರೂ. ದಂಡವನ್ನು ವಿಧಿಸಿದೆ.
ಜನವರಿ 9ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಗೋ ಫಸ್ಟ್ ನ ಜಿ8 118 ವಿಮಾನ ದೆಹಲಿಗೆ ಟೇಕ್ ಆಫ್ ಆಗಿತ್ತು. ಆದರೆ 55 ಪ್ರಯಾಣಿಕರನ್ನು ವಿಮಾನ ಹತ್ತಿಸಿಕೊಳ್ಳುವುದಕ್ಕಿಂತಲೂ ಮೊದಲೇ ಹಾರಾಟ ಪ್ರಾರಂಭಿಸಿತ್ತು.
ಈ ಆಚಾತುರ್ಯ ಸಂಭವಿಸಿದ ಬೆನ್ನಲ್ಲೇ ಗೋ ಫಸ್ಟ್‌ಗೆ ಡಿಜಿಸಿಎ ನೋಟಿಸ್ ನೀಡಿತ್ತು. ನೋಟಿಸ್ ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಿತ್ತು.
ಸಿಬ್ಬಂದಿಯಿಂದ ಆದ ಆಚಾತುರ್ಯಕ್ಕಾಗಿ ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆ ಕೋರಿತ್ತು. ಪ್ರಯಾಣಿಕರಿಗೆ ದೆಹಲಿ ಮತ್ತು ಇತರ ಸ್ಥಳಗಳಿಗೆ ಪರ್ಯಾಯ ವಿಮಾನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಹೇಳಿಕೊಂಡಿತ್ತು.