6000 ಕೋಟಿ ರೂ.ವೆಚ್ಚದ ಅಮೃತಾ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ ಮೋದಿ.

66
firstsuddi

ಚಂಡೀಗಢ : ಹರಿಯಾಣದ ಫರಿದಾಬಾದ್ ನಲ್ಲಿ ದೇಶದ ಅತಿದೊಡ್ಡ ಖಾಸಗಿ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. 2,600 ಹಾಸಿಗೆಗಳಿರುವ ಸುಸಜ್ಜಿತ ಕಟ್ಟಡಕ್ಕೆ ಅಮೃತಾ ಆಸ್ಪತ್ರೆ ಎಂದು ಹೆಸರಿಡಲಾಗಿದೆ. ಕಟ್ಟಡದ ನಿರ್ಮಾಣಕ್ಕಾಗಿ 6,000 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಸಮಾರಂಭದಲ್ಲಿ ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಉಪಸ್ಥಿತರಿದ್ದರು.

ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ಆರೋಗ್ಯ ಮತ್ತು ಆಧ್ಯಾತ್ಮಿಕತೆಯಲ್ಲಿ ನಿಕಟ ಸಂಬಂಧ ಹೊಂದಿರುವ ದೇಶ. ಕೋವಿಡ್ ಮಹಾಮಾರಿ ಯಶಸ್ವಿ ಆಧ್ಯಾತ್ಮಿಕ ಖಾಸಗಿ ಪಾಲುದಾರಿಕೆಗೆ ಒಂದು ಪರಿಪೂರ್ಣ ಉದಾಹರಣೆ. ಇದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಿದೆ ಎಂದರು.

ಆಸ್ಪತ್ರೆಯ ವಿಶೇಷತೆಯೇನು?
ಸುಮಾರು 130 ಎಕರೆಯ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಅಮೃತಾ ಆಸ್ಪತ್ರೆಯಲ್ಲಿ ಏಳು ಅಂತಸ್ತಿನ ಸಂಶೋಧನಾ ಬ್ಲಾಕ್ ಇದೆ. ಮಾತಾ ಅಮೃತಾನಂದಮಯಿ ಟ್ರಸ್ಟ್ ವತಿಯಿಂದ 6 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಆಸ್ಪತ್ರೆಯ ಕಟ್ಟಡಗಳು 36 ಲಕ್ಷ ಚದರ ಅಡಿಗಳಷ್ಟು ಪ್ರದೇಶದಲ್ಲಿ ವ್ಯಾಪಿಸುತ್ತವೆ. 14 ಮಹಡಿಗಳ ಗೋಪುರವು ಪ್ರಮುಖ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಇದೆ.