ಚಿಕ್ಕಮಗಳೂರು : ಇಂದಿನ ಪೀಳಿಗೆ ಪರಿಸರ ಪ್ರೀತಿ ಮತ್ತು ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಸಲಹೆ ನೀಡಿದರು.
ಭಾರತ ಸೇವಾದಳದ ಜಿಲ್ಲಾ ಘಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಇಂದು ಆಯೋಜಿಸಿದ್ದ ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮತ್ತು ಯುವಜನತೆ ವಿದ್ಯೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನೂ ಮಾಡಬೇಕು, ಅಶಕ್ತರು, ಅಸಹಾಯಕರಿಗೆ ಸಹಾಯ ಹಸ್ತ ಚಾಚಬೇಕು, ಶ್ರಮದಾನದ ಮೂಲಕ ಪರಿಸರವನ್ನು ಸ್ವಚ್ಚವಾಗಿಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನಗರಸಭೆ ಮಾಡಬೇಕಾದ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿರುವುದು ಶ್ಲಾಘನೀಯ, ಇದನ್ನು ಎಲ್ಲರೂ ಅನುಸರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಭಾರತ ಸೇವಾದಳದ ಪದಾಧಿಕಾರಿಗಳು, ಕಾರ್ಯಕರ್ತರು, ಬೇಲೂರು ರಸ್ತೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಾಮೂಹಿಕ ಶ್ರಮದಾನದ ಮೂಲಕ ದೇವಾಲಯದ ಆವರಣವನ್ನು ಸ್ವಚ್ಚಗೊಳಿಸಿದರು.
ಮಾಜಿ ಶಾಸಕ ಐ.ಬಿ.ಶಂಕರ್, ಭಾರತ ಸೇವಾದಳದ ಸದಸ್ಯೆ ಉಮಾ ಐ.ಬಿ.ಶಂಕರ್, ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಅಧ್ಯಕ್ಷ ಸಿ.ಸಿ.ಈರೇಗೌಡ, ಮಾಜಿ ಅಧ್ಯಕ್ಷ ಬಿ.ಆರ್.ಜಗದೀಶ್, ಕವಿತಾ ಗೋಪಾಲ್, ನಗರಸಭೆ ಉಪಾಧ್ಯಕ್ಷೆ ಉಮಾ, ಎನ್‍ವೈಕೆ ಅಧಿಕಾರಿ ಅಭಿಷೇಕ್ ಚವರೆ, ದೇವಾಲಯದ ಪ್ರಧಾನ ಅರ್ಚಕ ಡಿ.ಆರ್.ಕುಮಾರಸ್ವಾಮಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.










