68ನೇ ಕನ್ನಡ ರಾಜ್ಯೋತ್ಸವ: ಕನ್ನಡದಲ್ಲೇ ಶುಭ ಹಾರೈಸಿದ ಮೋದಿ.

47
firstsuddi

ನವದೆಹಲಿ/ಬೆಂಗಳೂರು: ರಾಜ್ಯಾದ್ಯಂತ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರೂ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.

ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮೋದಿ ಅವರು, ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1 ರಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯವೆಂದು ಘೋಷಣೆ ಮಾಡಲಾಯಿತು.

ಮೈಸೂರು ರಾಜ್ಯ ನಿರ್ಮಾಣವಾದುದರ ಸಂಕೇತವಾಗಿ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ನೆಲಸಿರುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ.