69 ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು 50 ಜನರ ಸಮಿತಿ ರಚನೆ.

7

ಬೆಂಗಳೂರು: ವಿಧಾನಸೌಧದ ಮಹಾದ್ವಾರದ ಮೆಟ್ಟಿಲುಗಳ ಮೇಲೆ ನವೆಂಬರ್ 1ರಂದು ನಡೆಯಲಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ 50ರ ಸಮಾರೋಪ ಸಮಾರಂಭ ನಡೆಯಲಿದ್ದು, ಇದೇ ವೇಳೆ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಸಾಧಕರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು, ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಿ ಆದೇಶಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೇತೃತ್ವದ ಸಲಹಾ ಸಮಿತಿ 36 ಸದಸ್ಯರು ಮತ್ತು 13 ಪದನಿಮಿತ್ತ ಸದಸ್ಯರನ್ನು ಒಳಗೊಂಡಿದೆ. ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವವರನ್ನು ಈ ಸಲಹಾ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನ ವೆಬ್‍ಸೈಟ್ ಮೂಲಕ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಅವಕಾಶ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ನೇತೃತ್ವದ ಈ ಸಲಹಾ ಸಮಿತಿ ಮುಂದಿನ ವಾರದಿಂದಲೇ ಪರಿಶೀಲನೆ ನಡೆಸಲಿದೆ. 69ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಲೆ, ಸಾಹಿತ್ಯ, ಜಾನಪದ, ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ 69 ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಕೂಡ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸೇವಾ ಸಿಂಧು ಪೋರ್ಟಲ್‌ನ ವೆಬ್‍ಸೈಟ್ https://sevasindhu.Karnataka.gov.in ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸೆ.30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿ ಆಕಾಂಕ್ಷಿಗಳ ಪಟ್ಟಿ ಸಾವಿರದ ಗಡಿ ದಾಟಿದೆ. ಇದುವರೆಗೆ ಸುಮಾರು 1700ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.