ನವದೆಹಲಿ : ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಈ ಮೂಲಕ 69 ವರ್ಷದ ಬಳಿಕ ಮತ್ತೆ ಮಾತೃಸಂಸ್ಥೆಯ ತೆಕ್ಕೆಗೆ ಮರಳಿದೆ.
ಕಳೆದ ವರ್ಷದ ಆಕ್ಟೋಬರ್ ತಿಂಗಳಿನಲ್ಲೇ ಟಾಟಾ ಕಂಪನಿಯು ಬಿಡ್ ನಲ್ಲಿ ಏರ್ ಇಂಡಿಯಾವನ್ನ ತನ್ನದಾಗಿಸಿಕೊಂಡಿತ್ತು. ಇಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಟಾಟಾ ಕಂಪನಿಗೆ ಹಸ್ತಾಂತರ ಮಾಡಿದೆ. ಏರ್ ಇಂಡಿಯಾ ಅಧಿಕೃತ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಏರ್ ಇಂಡಿಯಾ ಟಾಟಾ ಗ್ರೂಪ್ ಗೆ ಹಸ್ತಾಂತರಗೊಂಡಿದೆ.
ಹರಾಜಿಗೆ ಸಂಬಂಧಿಸಿದ ಎಲ್ಲಾ ವಿಧಾನಗಳು ಪೂರ್ಣಗೊಂಡಿವೆ. ಏರ್ ಇಂಡಿಯಾ ಹೂಡಿಕೆ ಪ್ರಕ್ರಿಯೆ ಮುಚ್ಚಲಾಗಿದೆ. ಷೇರುಗಳನ್ನು ಏರ್ ಇಂಡಿಯಾದ ಹೊಸ ಮಾಲೀಕರಾಗಿರುವ ತಾಲೇಸ್ ಪ್ರೈವೆಟ್ ಲಿಮಿಟೆಡ್ ಗೆ (ಟಾಟಾ ಸನ್ಸ್) ವರ್ಗಾಯಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ತಿಳಿಸಿದ್ದಾರೆ.
1932ರ ಅಕ್ಟೋಬರ್ ನಲ್ಲಿ ‘ಟಾಟಾ ಏರ್ಲೈನ್ಸ್’ ಹೆಸರಿನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಸ್ಥಾಪಿಸಿತ್ತು. 1953 ರಲ್ಲಿ ಭಾರತ ಸರ್ಕಾರವು ಇದನ್ನು ರಾಷ್ಟ್ರೀಕರಣಗೊಳಿಸಿತ್ತು. ಇದಾದ ಬಳಿಕ ಅಪಾರ ನಷ್ಟ ಅನುಭವಿಸಿದ ಕಾರಣ ಏರ್ ಇಂಡಿಯಾವನ್ನು 18,000 ಕೋಟಿ ರೂ.ಗೆ ಟಾಟಾ ಸನ್ಸ್ ಗೆ ಮಾರಾಟ ಮಾಡಿತ್ತು.










