ಚಿಕ್ಕಮಗಳೂರು : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ 7 ದಿನಗಳ ವಿಶೇಷ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭವನ್ನು ಇತ್ತಿಚೆಗೆ ಬೀಕನಹಳ್ಳಿಯ ವಸತಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಚಿಕ್ಕಮಗಳೂರು ತಾಲೂಕಿನ ವಸತಿ ಶಾಲೆಯ ಆಯ್ದ ಪ.ಜಾ ಮತ್ತು ಪ.ಪಂಗಡದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಏಳು ದಿನಗಳ ವಿಶೇಷ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ್‍ರವರು ಮಾತನಾಡುತ್ತ ಯುವಕರಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕ ಸಮತೋಲನದಿಂದ ಸರ್ವತೋಮಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯನ್ನು ನೀಡಿದ್ದಕ್ಕಾಗಿ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾರವರಿಗೆ ಧನ್ಯವಾದಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾರವರು ಶಿಬಿರದಲ್ಲಿ ಕಲಿತ ವಿಚಾರಗಳನ್ನು ವಿದ್ಯಾರ್ಥಿಗಳು ಪ್ರತಿದಿನ ಅಭ್ಯಾಸ ಮಾಡುವುದಲ್ಲದೆ ಶಾಲೆಯ ಇನ್ನಿತರ ಆಸಕ್ತ ವಿದ್ಯಾರ್ಥಿಗಳಿಗೂ ಕಲಿಸಿಕೊಡಬೇಕೆಂದು ತಿಳಿಸಿದರು.
ನಂತರ ಮಾತನಾಡಿದ ಅತಿಥೇಯ ಶಾಲೆಯ ಪ್ರಾಂಶುಪಾಲರಾದ ವಿಜಯ್‍ಕುಮಾರ್ ಕ್ರೀಡಾಸಕ್ತಿ ಇರುವ ವಿದ್ಯಾರ್ಥಿಗಳಿಗೆ ಇಂತಹ ತರಬೇತಿಯ ಅವಶ್ಯಕತೆ ತುಂಬ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಬಿರದ ತರಬೇತುದಾರರಾದ ಶಿವಪ್ಪ, ವಸಂತ ಕುಮಾರಿ ಹಾಗೂ ನಾಗರಾಜ್ ಉಪಸ್ಥಿತರಿದ್ದರು.










