70 ಸಾವಿರಕ್ಕೆ ಖರೀದಿಸಿದ ಪತ್ನಿಯನ್ನು ಕತ್ತು ಹಿಸುಕಿ ಕೊಂದು ಶವವನ್ನು ಕಾಡಿನಲ್ಲಿ ಎಸೆದ ಪಾಪಿ ಪತಿ…

56
firstsuddi

ನವದೆಹಲಿ: ವ್ಯಕ್ತಿಯೊಬ್ಬ ಮಹಿಳೆಯನ್ನು 70 ಸಾವಿರ ರೂ.ಗೆ ಖರೀದಿ ಮಾಡಿ, ಮದುವೆಯಾದ ಬಳಿಕ ಆಕೆಯ ನಡವಳಿಕೆ ಇಷ್ಟವಾಗದೆ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕೃತ್ಯದ ಬಳಿಕ ವ್ಯಕ್ತಿ ಪತ್ನಿಯ ಶವವನ್ನು ಫತೇಪುರ್ ಬೇರಿಯ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಧರಂವೀರ್ ಹಾಗೂ ಕೊಲೆಗೆ ಸಹಾಯ ಮಾಡಿದ ಅರುಣ್ ಹಾಗೂ ಸತ್ಯವಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಫತೇಪುರ್ ಬೇರಿಯ ಝೀಲ್ ಖುರ್ದ್ ಗಡಿಯ ಬಳಿಯ ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ತಲುಪಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

ತನಿಖೆ ವೇಳೆ ಸುತ್ತಮುತ್ತಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಧ್ಯರಾತ್ರಿ 1.30ರ ಸುಮಾರಿಗೆ ಆಟೋರಿಕ್ಷಾ ಒಂದು ಓಡಾಡಿರುವುದು ಕಾಣಿಸಿದೆ, ಇಷ್ಟೊತ್ತಿಗೆ ಆ ಆಟೋ ಯಾಕೆ ಅಲ್ಲಿಗೆ ಬಂದಿತ್ತು ಎಂಬುದರ ಜಾಡು ಹಿಡಿದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಆಟೋ ನಂಬರ್ ಅನ್ನು ಕಂಡುಹಿಡಿದ ಪೊಲೀಸರು ಅದನ್ನು ಟ್ರ್ಯಾಕ್ ಮಾಡಿದ್ದಾರೆ. ಚಾಲಕ ಛತ್ತರ್‌ಪುರ ನಿವಾಸಿ ಅರುಣ್‌ನನ್ನು ಗಡಾಯಿಪುರ ಬ್ಯಾಂಡ್ ರಸ್ತೆ ಬಳಿ ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಮೃತರನ್ನು ಧರಂವೀರ್‌ ಅವರ ಪತ್ನಿ ಸ್ವೀಟಿ ಎಂದು ಅರುಣ್ ಹೇಳಿದ್ದಾರೆ.
ವಿಚಾರಣೆ ವೇಳೆ ಅರುಣ್, ಧರಂವೀರ್ ಹಾಗೂ ಸತ್ಯವಾನ್ ತನ್ನ ಸಂಬಂಧಿಕರಾಗಿದ್ದು, ನಂಗ್ಲೋಯಿ ನಿವಾಸಿಗಳು. ಅವರು ಸ್ವೀಟಿಯನ್ನು ಹರ್ಯಾಣದ ಗಡಿಯಲ್ಲಿ ಕತ್ತು ಹಿಸುಕಿ ಕೊಂದು ಶವವನ್ನು ಕಾಡಿನಲ್ಲಿ ಎಸೆದಿರುವುದಾಗಿ ತಿಳಿಸಿದ್ದಾನೆ. ಧರಂವೀರ್‌ಗೆ ತನ್ನ ಪತ್ನಿ ಬಗ್ಗೆ ಅಸಮಾಧಾನವಿತ್ತು. ಆಕೆ ಯಾವುದೇ ಮಾಹಿತಿಯನ್ನು ನೀಡದೇ ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದಳು. ಹೀಗಾಗಿ ಆಕೆಯನ್ನು ಆತ ಕೊಲೆ ಮಾಡಿದ್ದಾನೆ ಎಂದು ಅರುಣ್ ಮಾಹಿತಿ ನೀಡಿದ್ದಾನೆ.

ಮೃತ ಮಹಿಳೆಗೆ ಧರಂವೀರ್ 70,000 ರೂ. ಪಾವತಿ ಮಾಡಿ, ವಿವಾಹವಾಗಿದ್ದ. ಆಕೆ ಬಿಹಾರದ ಪಾಟ್ನಾ ಮೂಲದವಳು ಎಂಬುದನ್ನು ಮಾತ್ರ ಬಹಿರಂಗಪಡಿಸಿದ್ದು, ತನ್ನ ಪೋಷಕರ ಬಗ್ಗೆ ಅಥವಾ ಕುಟುಂಬದವರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಟ್ಟಿರಲಿಲ್ಲ ಎಂದು ಆರೋಪಿ ತಿಳಿಸಿದ್ದಾನೆ.

ಅಪರಾಧ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು, ಮಹಿಳೆ ತನ್ನ ಗಂಡನ ಮನೆಯನ್ನು ಬಿಟ್ಟು ತಿಂಗಳುಗಟ್ಟಲೆ ಎಲ್ಲಿಗೆ ಹೋಗುತ್ತಿದ್ದಳು ಎಂಬುದು ಸಹ ಸ್ಪಷ್ಟವಾಗಿಲ್ಲ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.