70 ವರ್ಷಗಳ ನಂತರ ಭಾರತಕ್ಕೆ ಬಂದಿಳಿದ ಆಫ್ರಿಕನ್ ಚೀತಾ – ವಿಶೇಷತೆ ಏನು?

50
firstsuddi

ಗ್ವಾಲಿಯರ್ : ಬರೋಬ್ಬರಿ 70 ವರ್ಷಗಳ ಬಳಿಕ 8 ಚೀತಾಗಳು ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇವುಗಳನ್ನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಚರಿತ್ರೆಯಲ್ಲಿ ಇದು ಐತಿಹಾಸಿಕ ದಿನ. 1952ರ ನಂತರ ಭಾರತದಲ್ಲಿ ಚೀತಾಗಳು ನಶಿಸಿ ಹೋಗಿವೆ ಎಂಬ ಬೇಸರವಿತ್ತು. ಆದರೆ, ಇದೀಗ ನಾವು ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಹೊತ್ತಿನಲ್ಲಿ ದೇಶಕ್ಕೆ ಮತ್ತೊಂದು ಹೊಸ ಶಕ್ತಿ ಬಂದಿದೆ ಎಂದು ಬಣ್ಣಿಸಿದರು.

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಈ ವಿಶೇಷ ಚೀತಾ ನೋಡಲು ಜನರು ತಾಳ್ಮೆಯ ಜೊತೆಗೆ ಮುಂದಿನ ಕೆಲ ತಿಂಗಳ ಕಾಲ ಕಾಯಬೇಕು. ಈ ಚೀತಾಗಳು ಈ ಪ್ರದೇಶದ ಬಗ್ಗೆ ಅರಿವಿಲ್ಲದೆ ಅತಿಥಿಗಳಾಗಿ ಆಗಮಿಸಿವೆ. ಅವು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು, ತಮ್ಮ ಮನೆ ಮಾಡಿಕೊಳ್ಳಲು ಸಮಯ ನೀಡಬೇಕಾಗುತ್ತದೆ ಎಂದರು.

ಬರೋಬ್ಬರಿ ದಶಕಗಳ ಬಳಿಕ ಚೀತಾಗಳು ನಮ್ಮ ನೆಲಕ್ಕೆ ಮರಳಿವೆ. ಭಾರತೀಯ ಚರಿತ್ರೆಯಲ್ಲಿ ಇದು ಐತಿಹಾಸಿಕ ದಿನ. ಈ ಸಂದರ್ಭದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ನಾನು ಅಭಿನಂದಿಸುತ್ತೇನೆ. ಜೊತೆಗೆ ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಅವರ ಸಹಾಯವಿಲ್ಲದೇ ಈ ಯೋಜನೆ ಸಾಧ್ಯವಾಗುತ್ತಿರಲಿಲ್ಲ ಎಂದರು.

ಚೀತಾ ವಿಶೇಷತೆಯೇನು?
ನಮೀಬಿಯಾದಿಂದ ತರಲಾದ 8 ಚೀತಾಗಳಲ್ಲಿ 3 ಗಂಡು ಹಾಗೂ 5 ಹೆಣ್ಣು ಚೀತಾಗಳಿವೆ. ಇವು 2 ರಿಂದ 6 ವರ್ಷ ಆಸುಪಾಸಿನದ್ದಾಗಿವೆ. ಯಾವುದೇ ಸೋಂಕಿಗೆ ತುತ್ತಾಗದಂತೆ, ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿತ್ತು. ಈ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾದ ಕಾರಣ, ಅವುಗಳಿಗೆ ಕುನೋ ನ್ಯಾಷನಲ್ ಪಾರ್ಕ್ ನಲ್ಲಿ ಮುಕ್ತವಾಗಿ ವಿಹರಿಸಲು ಅವಕಾಶ ನೀಡಲಾಗುತ್ತದೆ.

1947ರಲ್ಲಿ ಚೀತಾಗಳ ಸಂತತಿ ನಾಶವಾದ ಕಾರಣ ಅದನ್ನ ವಿನಾಶಗೊಂಡ ಪ್ರಾಣಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಇದನ್ನ ಮರುಪರಿಚಯಿಸುವ ಕಾರ್ಯಕ್ಕೆ ಕೈಹಾಕಲಾಗಿತ್ತು. ಇದಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಆಫ್ರಿಕಾದಿಂದ ಚೀತಾಗಳ ಕರೆತರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದೀಗ 75 ವರ್ಷಗಳ ಬಳಿಕ ಭಾರತಕ್ಕೆ ಚೀತಾಗಳು ಬಂದಿವೆ.

ಈ ಚೀತಾಗಳಿಗೆ ಕುನೋ ಉದ್ಯಾನವನ ಪರಿಸರ ಅನುಕೂಲಕರವಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಆಫ್ರಿಕನ್ ಚೀತಾಗಳಿಗೆ ತೆಳುಕಪ್ಪು ಬಣ್ಣದ ಮಚ್ಚೆ ಇದ್ದರೆ, ಚಿರತೆಗಳಿಗೆ ಕಡುಕಪ್ಪು ಬಣ್ಣದ ಗುಲಾಬಿ ಪಕಳೆ ಆಕಾರ ಇರುತ್ತದೆ. ಚಿರತೆ ಗಂಟೆಗೆ 58 ಕಿ.ಮೀ ಓಡಿದರೆ, ಚೀತಾ ಗಂಟೆಗೆ 120 ಕಿ.ಮೀ ಓಡಬಲ್ಲದು.