ಬೆಂಗಳೂರು: 70 ವರ್ಷದ ವೃದ್ಧ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆಂದು 63 ವರ್ಷದ ವೃದ್ಧೆ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ದಯಾಮಣಿ (63) ಎಂಬ ವೃದ್ಧೆ ಲೋಕನಾಥ್ (72) ಎಂಬ ವೃದ್ಧನ ವಿರುದ್ಧ ಬೆಂಗಳೂರಿನ ಪೂರ್ವ ವಿಭಾಗ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಹಲಸೂರು ನಿವಾಸಿಯಾದ ದಯಾಮಣಿಗೆ ಮದುವೆ ಆಗಿ ಗಂಡ ಮರಣ ಹೊಂದಿದ್ದರು. ಲೋಕನಾಥ್ ಪತ್ನಿ ಕೂಡ ಮರಣ ಹೊಂದಿದ್ದು, ಮಗನಿಗೆ ಮದುವೆ ಮಾಡಿಸುವ ಸಲುವಾಗಿ ಹೆಣ್ಣು ನೋಡುತ್ತಿದ್ದರು. ಈ ವೇಳೆ ದಯಾಮಣಿ ಹೆಣ್ಣು ತೋರಿಸುವುದಾಗಿ ಲೋಕನಾಥ್‌ಗೆ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು.
ಹಲವು ತಿಂಗಳು ಪ್ರೇಮಿಗಳಂತೆ ಸಿನಿಮಾ, ಪಾರ್ಕ್ ಎಂದು ವೃದ್ಧ ಪ್ರೇಮಿಗಳು ಓಡಾಟ ಮಾಡಿದ್ದಾರೆ. ನಂತರದ ದಿನಗಳಲ್ಲಿ ವೃದ್ದ ಲೋಕನಾಥನ್ ದಯಾಮಣಿಯನ್ನು ದೂರ ಮಾಡಲು ಶುರು ಮಾಡಿದ್ದರು. ಈ ಸಂಬಂಧ ದಯಾಮಣಿ ಲೋಕನಾಥ್ ನನ್ನು ಪ್ರಶ್ನೆ ಮಾಡಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಬೇಸತ್ತ ದಯಾಮಣಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










