82 ವರ್ಷದ ವೃದ್ಧೆಯನ್ನು ಛತ್ರಿಯಲ್ಲಿ ಹೊಡೆದು ಹತ್ಯೆಗೈದ 60 ವರ್ಷದ ವೃದ್ಧ.

75
firstsuddi

ಜೈಪುರ: ರಾಜಸ್ಥಾನದ ಉದಯಪುರದಲ್ಲಿ 60 ವರ್ಷದ ವೃದ್ಧರೊಬ್ಬರು 82 ವರ್ಷದ ವೃದ್ಧೆಯನ್ನು ಛತ್ರಿಯಲ್ಲಿ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ವೀಡಿಯೋವೊಂದು ವೈರಲ್ ಆಗಿದೆ.

ಮೃತ ವೃದ್ಧೆಯನ್ನು ಕಲ್ಕಿ ಬಾಯಿ ಗಮೆತಿ ಎಂದು ಗುರುತಿಸಲಾಗಿದೆ. ವೃದ್ಧನು ವೃದ್ಧೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಅಲ್ಲಿಯೇ ಇದ್ದ ಜನ ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.

ಕುಡಿದ ಮತ್ತಿನಲ್ಲಿ ವೃದ್ಧ ಆರೋಪಿ ಪ್ರತಾಪ್ ಸಿಂಹ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ಮಾಡುವಾಗ ತಡೆಯಲು ಓರ್ವ ವ್ಯಕ್ತಿ ಯತ್ನಿಸಿದ್ದಾರೆ. ಆದರೆ ಸಿಂಗ್ ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳದೇ ಛತ್ರಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಕಂಠಪೂರ್ತಿ ಕುಡಿದಿದ್ದ ಆರೋಪಿಯು ಮಹಿಳೆ ಪಕ್ಕದಲ್ಲಿ ಕುಳಿತುಕೊಂಡು ತಾನು ಶಿವನ ಅನುಯಾಯಿಯಾಗಿದ್ದು, ಅವನು ನನ್ನನ್ನು ನಿನ್ನ ಬಳಿ ಕಳುಹಿಸಿದ್ದಾನೆ ಎಂದು ಹೇಳುವುದನ್ನು ಕಾಣಬಹುದಾಗಿದೆ. ಬಳಿಕ ಇದ್ದಕ್ಕಿದ್ದಂತೆ ಆಕೆಯ ಎದೆಯ ಮೇಲೆ ಛತ್ರಿಯಂದ ಹೊಡೆಯುತ್ತಾನೆ. ರಕ್ತಸ್ರಾವವಾದರೂ ಕೂಡ ಥಳಿಸುವುದನ್ನು ಮುಂದುವರೆಸಿದ್ದನು. ಸ್ವಲ್ಪ ಸಮಯದ ನಂತರ ವೃದ್ಧೆ ಪ್ರಜ್ಞಾಹೀನಳಾಗಿದ್ದಳು.

ದೂರದ, ಗುಡ್ಡಗಾಡು, ಬುಡಕಟ್ಟು ಪ್ರಾಬಲ್ಯದ ಪ್ರದೇಶವಾದ ಉದಯಪುರದ ಗೋಗುಂಡಾ ತಹಸಿಲ್‍ನಲ್ಲಿ ಈ ಪ್ರಕರಣ ನಡೆದಿದೆ. ವೃದ್ಧೆ ಒಬ್ಬರ ಮನೆಗೆ ಹೋಗುತ್ತಿದ್ದರು. ಆಗ ಪ್ರತಾಪ್ ಸಿಂಹ ಆಕೆಯನ್ನು ಭೇಟಿಯಾಗಿದ್ದಾನೆ. ಘಟನೆಯ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲಿದ್ದರು ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ತಿಳಿಸಿದ್ದಾರೆ.