ಹಾಲಿವುಡ್ ಹಿರಿಯ ನಟ ಮತ್ತು ಅಕಾಡೆಮಿ ವಿಜೇತ ಅಲ್ ಪಚಿನೋ ನಾಲ್ಕನೇ ಬಾರಿಗೆ ತಂದೆಯಾಗಿದ್ದಾರೆ. 83 ವರ್ಷದ ನಟ, 29 ವರ್ಷದ ಗೆಳತಿ ನೂರ್ ಅಲ್ಫಲ್ಲಾಹ್ ಅವರೊಂದಿಗೆ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ಜೋಡಿ ತಮ್ಮ ಮಗನಿಗೆ ರೋಮನ್ ಪಚಿನೋ ಎಂದು ಹೆಸರಿಟ್ಟಿದ್ದಾರೆ.
ನೂರ್ ಅಲ್ಫಲ್ಲಾಹ್ ಅವರು ಗರ್ಭಿಣಿ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ ಅವರು ಗರ್ಭಿಣಿ ಆಗಿದ್ದಕ್ಕೆ ತಾವು ಕಾರಣ ಹೌದೋ ಅಲ್ಲವೋ ಎಂಬ ಅನುಮಾನ ಅಲ್ ಪಚಿನೋ ಅವರಿಗೆ ಇತ್ತು. 83ನೇ ವಯಸ್ಸಿನಲ್ಲಿ ತಾವು ತಂದೆ ಆಗುವ ಸಾಮರ್ಥ್ಯ ಹೊಂದಿಲ್ಲ ಎಂದು ಅವರು ಭಾವಿಸಿದ್ದರು. ಅದಕ್ಕಾಗಿ ಅವರು ಡಿಎನ್ಎ ಟೆಸ್ಟ್ ಕೂಡ ಮಾಡಿಸಿದ್ದರು. ಆಗ ಅಸಲಿ ವಿಷಯ ಹೊರಬಿದ್ದಿತ್ತು. ನೂರ್ ಅಲ್ಫಲ್ಲಾಹ್ ಗರ್ಭಿಣಿ ಆಗಿದ್ದಕ್ಕೆ ಅಲ್ ಪಚಿನೋ ಅವರೇ ಕಾರಣ ಎಂಬುದು ಬಯಲಾಗಿತ್ತು.
ಅಲ್ ಪಚಿನೋ ಮತ್ತು ನೂರ್ ಅಲ್ಫಲ್ಲಾಹ್ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. 2022ರಿಂದ ಈಚೆಗೆ ಅನೇಕ ಬಾರಿ ಅವರು ಒಟ್ಟಿಗೆ ಕಾಣಿಸಿಕೊಂಡು ಸುದ್ದಿ ಆಗಿದ್ದರು. ಹಾಲಿವುಡ್ನಲ್ಲಿ ಬಹಳ ಫೇಮಸ್ ನಟನಾಗಿ ಅಲ್ ಪಚಿನೋ ಗುರುತಿಸಿಕೊಂಡಿದ್ದಾರೆ. ‘ಗಾಡ್ ಫಾದರ್’, ‘ಸೆಂಟ್ ಆಫ್ ಎ ವುಮನ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಅವರು ಗಮನ ಸೆಳೆದಿದ್ದಾರೆ. ಅವರ ನಟನೆಗೆ ಆಸ್ಕರ್ ಪ್ರಶಸ್ತಿ, ಟೋನಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ.
ಅಲ್ ಪಚಿನೋ ಅವರಿಗೆ ಈಗಾಗಲೇ ಮೂವರು ಮಕ್ಕಳು ಇದ್ದಾರೆ. ಈಗ ಜನಿಸಿರುವುದು ನಾಲ್ಕನೇ ಮಗು. ಆದರೆ ಅಲ್ ಪಚಿನೋಗೆ ಮದುವೆ ಆಗಿಲ್ಲ. ಈ ನಾಲ್ಕೂ ಮಕ್ಕಳು ಜನಿಸಿರುವುದು ಮೂವರು ಪ್ರೇಯಸಿಯರಿಗೆ. ಈಗ 4ನೇ ಮಗುವಿಗೆ ಅಪ್ ಪಚಿನೋ ತಂದೆ ಆಗುವ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ.
ಡೇಟಿಂಗ್ ವಿಚಾರದಲ್ಲಿ ನೂರ್ ಅಲ್ಫಲ್ಲಾಹ್ ಅವರದ್ದು ಕೂಡ ಡಿಫರೆಂಟ್ ಅಭಿರುಚಿ. ತಮಗೆ 22 ವರ್ಷ ವಯಸ್ಸಾಗಿದ್ದಾಗಲೇ 50 ಪ್ಲಸ್ ವಯಸ್ಸಿನ ಪುರುಷರ ಜೊತೆ ಅವರು ಡೇಟಿಂಗ್ ಮಾಡಿದ್ದರು. ಅವರು ಡೇಟಿಂಗ್ ಮಾಡಿರುವುದೆಲ್ಲ ಶ್ರೀಮಂತ ವ್ಯಕ್ತಿಗಳನ್ನೇ ಎಂಬುದು ಗಮನಿಸಬೇಕಾದ ಅಂಶ. ಸದ್ಯ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಅದರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.










