ಬೆಂಗಳೂರು: ಪೊಲೀಸರು ನಗರದಲ್ಲಿ ಬೃಹತ್ ಸೈಬರ್ ಕ್ರೈಂ ಜಾಲವನ್ನು ಪತ್ತೆ ಹಚ್ಚಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಗ್ಯಾಂಗ್ ದೇಶಾದ್ಯಂತ ಸುಮಾರು 854 ಕೋಟಿ ರೂ. ಲೂಟಿ ಮಾಡಿದ್ದು, ಬೆಂಗಳೂರಿನಲ್ಲಿ 17 ಪ್ರಕರಣಗಳು ದಾಖಲಾಗಿವೆ. ಮನೋಜ್ ಅಲಿಯಾಸ್ ಜಾಕ್, ಫಣೀಂದ್ರ, ವಸಂತ್, ಶ್ರೀನಿವಾಸ, ಚಕ್ರಾದರ್ ಅಲಿಯಾಸ್ ಚಕ್ರಿ, ಸೋಮಶೇಖರ್ ಅಲಿಯಾಸ್ ಅಂಕಲ್ ಬಂಧಿತ ಆರೋಪಿಗಳು. ತನಿಖೆ ವೇಳೆ ದೇಶದ ಹಲವೆಡೆ 5,013 ಪ್ರಕರಣ ದಾಖಲಾಗಿವೆ. ಬಂಧಿತರು ಸೃಷ್ಟಿಸಿದ 84 ಬ್ಯಾಂಕ್ ಖಾತೆಗಳಲ್ಲಿ 854 ಕೋಟಿ ಹಣ ವಹಿವಾಟು ಆಗಿದ್ದು, ಸದ್ಯ ಬ್ಯಾಂಕ್ ಖಾತೆಗಳಿಂದ 5 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ.
ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಭಾರತದಾದ್ಯಂತ ಜಾಬ್ ಆಫರ್ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿತ್ತು. ಮೆಸೇಜ್ ಕಳುಹಿಸಲು ಮತ್ತು ಸಾರ್ವಜನಿಕರ ಜೊತೆ ಸಂವಹನ ನಡೆಸಲು ಬೇರೆನೇ ತಂಡ ಇತ್ತು. ಪಾರ್ಟ್ ಟೈಮ್ ಜಾಬ್, ಗೂಗಲ್‌ನಲ್ಲಿ ಹೋಟೆಲ್ ಸೇರಿ ವಿವಿಧ ಶಾಪ್‌ಗಳಿಗೆ ಸ್ಟಾರ್ ರೇಟಿಂಗ್ ನೀಡಿ ಗೂಗಲ್ ರಿವ್ಯೂ ಹಾಕುವಂತೆ ಹೇಳುತ್ತಿದ್ದರು. ಈ ರೀತಿ ಮಾಡಿದರೆ ಹಣ ನೀಡುತ್ತೇವೆ ಎಂದು ನಂಬಿಸಿ ಬಳಿಕ ಟೆಲಿಗ್ರಾಂ ಗ್ರೂಪ್‌ನಲ್ಲಿ ಸೇರಿಸುತ್ತಿದ್ದರು. ಆರೋಪಿಗಳು ಸೇರಿದ್ದ ಟೆಲಿಗ್ರಾಂ ಗ್ರೂಪ್‌ನಲ್ಲಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧ ಪಟ್ಟು ಹೂಡಿಕೆ ಮಾಡಲು ಪ್ರೇರಣೆ ಮಾಡಲಾಗುತ್ತಿತ್ತು.
ಒಂದು ಸಾವಿರದಿಂದ ಹತ್ತು ಸಾವಿರ ಹೂಡಿಕೆ ಮಾಡಲು ಹೇಳುತ್ತಿದ್ದರು. ಇಷ್ಟು ಹೂಡಿಕೆ ಮಾಡಿದರೆ ದಿನಕ್ಕೆ ಸಾವಿರದಿಂದ ಐದು ಸಾವಿರ ಹಣ ಬರುತ್ತೆ ಎಂದು ಹೇಳಿ ಪ್ರಾರಂಭದಲ್ಲಿ ಹಣ ನೀಡುತ್ತಿದ್ದರು. ಗ್ರೂಪ್‌ನಲ್ಲಿ ಇದ್ದವರು ತಮಗೆ ಇಂತಿಷ್ಟು ಲಾಭ ಬಂದಿದೆ ಎಂದೆಲ್ಲಾ ಮಾಹಿತಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರ ನಂಬಿಕೆ ಗಳಿಸಿ ಹೂಡಿಕೆ ಮಾಡಿಸುತ್ತಿದ್ದರು. ಒಬ್ಬೊಬ್ಬರಿಂದ ಲಕ್ಷದಿಂದ ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಲಾಗುತ್ತಿತ್ತು. ಹೀಗೆ ಹೂಡಿಕೆ ಮಾಡಿಸುತ್ತಿದ್ದ ಹಣ ಬೆಂಗಳೂರಿನ ವಿವಿಧ ಬ್ಯಾಂಕ್‌ನಲ್ಲಿನ ಕರೆಂಟ್ ಅಕೌಂಟ್‌ಗೆ ಸೇರುತ್ತಿತ್ತು. ನಂತರ ಹಣ ವಿದೇಶದ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿತ್ತು. ಬಳಿಕ ಬ್ಯಾಂಕ್ ಅಕೌಂಟ್ ಮ್ಯಾನೇಜ್ ಮಾಡುತ್ತಿದ್ದ ಗ್ಯಾಂಗ್‌ಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ನೀಡಲಾಗುತ್ತಿತ್ತು. ಈ ಹಣವನ್ನು ವಿದೇಶಿ ಗ್ಯಾಂಗ್, ವಿದೇಶದ ವಿವಿಧ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದರು.
ಬಂಧಿತ ಆರೋಪಿಗಳ ಬಳಿ ಕಂಪ್ಯೂಟರ್, ಮೊಬೈಲ್, ಲ್ಯಾಪ್‌ಟಾಪ್, ಬ್ಯಾಂಕ್ ಅಕೌಂಟ್ ದಾಖಲೆಗಳು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸ್ವೈಪಿಂಗ್ ಮೆಷಿನ್, ಸಿಮ್ ಕಾರ್ಡ್‌ಗಳು, ಪ್ರಿಂಟರ್, ಚೆಕ್‌ಬುಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.










