ಬೆಂಗಳೂರು: ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಹಾಗೂ ಆರೋಗ್ಯ ಕುಟುಂಬ ಇಲಾಖೆ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ‘ಯೋಗ-ವಸುದೈವ ಕುಟುಂಬಕ್ಕಾಗಿ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ,ನಾನು ನಿಮ್ಮೆಲರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ನಮ್ಮ ಸಂಸ್ಕ್ರತಿಯಲ್ಲಿ ಯೋಗ ಇದೆ. ಹಳೆಯ ಗ್ರಂಥಗಳಲ್ಲೂ ಉಲ್ಲೇಖ ಇದೆ. ಯೋಗವು ದೇಹ, ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತೆ ಮನವಿ ಮಾಡಿದರು. ಈ ನಿರ್ಣಯಕ್ಕೆ ನೂರಾರು ದೇಶಗಳು ಬೆಂಬಲಿಸಿ ಯೋಗ ದಿನ ಆಚರಿಸುತ್ತಿವೆ. ಯೋಗದ ಮೂಲಕ ಮನುಕುಲವನ್ನು ಬೆಸೆಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಯೋಗ ನಮ್ಮ ದೇಶದ ಸಂಸ್ಕೃತಿ, ಪೂರ್ವಜರ ಕೊಡುಗೆ. ಇಂದು ವಿಶ್ವದೆಲ್ಲೆಡೆ ಯೋಗ ದಿನಾಚರಣೆ ಮಾಡಲಾಗುತ್ತಿದೆ. ನಮ್ಮ ಜೀವನ ಶೈಲಿ ಬದಲಾವಣೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಮನುಷ್ಯನಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಯೋಗ ಮಾಡುವುದರಿಂದ ಕಾಯಿಲೆಗಳನ್ನು ನಿಯಂತ್ರಿಸಬಹುದು. ಯೋಗ ನಮ್ಮೆಲ್ಲರ ಬದುಕಿನಲ್ಲಿ ಒಂದು ಅಂಗವಾಗಿ ಉಳಿಯಲಿ, ಯುವ ಜನರು ಯೋಗದ ಮಹತ್ವವನ್ನು ಅರಿತು ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಇದರಿಂದಾಗಿ ಹಿರಿಯರು ನಮಗೆ ನೀಡಿರುವ ಕೊಡುಗೆ ಇನ್ನೂ ಬೆಳೆಯಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಶಾಸಕರುಗಳಾದ ರಿಜ್ವಾನ್ ಅರ್ಷದ್, ಶರವಣನ್, ಕ್ರೀಡಾಪಟುಗಳಾದ ವೆಂಕಟೇಶ್ ಪ್ರಸಾದ್, ಅಂಜು ಬಿ ಜಾರ್ಜ್, ನಟಿ ಭಾವನಾ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸೇರಿದಂತೆ ಎಲ್ಲ ಗಣ್ಯರು ಯೋಗಾಸನ ಮಾಡಿದರು. ನಂತರ, ನುರಿತ ಯೋಗಾಪಟುಗಳು ಯೋಗ ಪ್ರದರ್ಶನ ಮಾಡಿದರು.










