ದೀಪಾವಳಿಯ ಸಂಭ್ರಮಾಚರಣೆಯ ನಂತರ ಅದೇ ಸಂಭ್ರಮವನ್ನು ತಂದು ಕೊಡುವುದು ಕಿರು ದೀಪಾವಳಿ ಎಂದೇ ಕರೆಯಲ್ಪಡುವ ವಿಷ್ಣು -ತುಳಸಿ ವಿವಾಹ. ಕಾರ್ತಿಕ ಮಾಸ ಶುಕ್ಲಪಕ್ಷದ ಉತ್ತಾನ ದ್ವಾದಶಿಯಂದು ವಿಶೇಷವಾಗಿ ತುಳಸಿ ಪೂಜೆಯನ್ನು ಪ್ರತಿ ಮನೆಯಲ್ಲೂ ನೆರವೇರಿಸಲಾಗುತ್ತದೆ. ಈ ತುಳಸಿ ಮಾತೆಯು ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಯುವತಿ ಈಕೆ ಜಲಂಧರನೆಂಬ ದುಷ್ಟ ರಾಜನನ್ನು ವರಿಸುತ್ತಾಳೆ. ಪರಮ ಪತಿವ್ರತೆಯಾದ ವೃಂದಾ ವಿಷ್ಣುವಿನ ಅದಮ್ಯ ಭಕ್ತೆ. ಈ ಭಕ್ತಿ ಪಾವಿತ್ರ್ಯತೆಗಳೇ ದುಷ್ಟ ಜಲಂಧರನ ಆಯಸ್ಸನ್ನು ಕಾಯುತಿದ್ದುದು. ಅವನ ಉಪಟಳ ಹೆಚ್ಚಾದಾಗ ದೇವತೆಗಳು ಶ್ರೀ ಹರಿಯ ಮೊರೆ ಹೋಗುತ್ತಾರೆ. ಜಲಂಧರನಿಗೆ ಬೆಂಗಾವಲಾಗಿದ್ದ ವೃಂದಾಳ ಪಾತಿವ್ರತ್ಯೆಯ ಬಗ್ಗೆ ಅರಿವಿದ್ದ ವಿಷ್ಣು ಜಲಂಧರನ ರೂಪ ಧರಿಸಿ ಆಕೆಯನ್ನು ಮೋಹಿಸುತ್ತಾನೆ. ಇದರಿಂದ ವೃಂದಾಳ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ. ಜಲಂಧರನ ಶಕ್ತಿ ಕುಂದುತ್ತದೆ. ಶಿವನು ಕೂಡಲೇ ಜಲಸಂಧರನ ವಧೆ ಮಾಡುತ್ತಾನೆ. ಇದನ್ನು ಅರಿತ ವೃಂದಾ ನೀನು ಕಪ್ಪು ಶಿಲೆಯಾಗಿ ಹೋಗು, ನಿನಗೂ ಪತ್ನಿ ವಿಯೋಗ ಬಂದೊದಗಲಿ ಎಂದು ವಿಷ್ಣುವನ್ನು ಶಪಿಸಿ ಪತಿಯ ಚಿತೆಗೆ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ. ಅಂತೆಯೇ ವಿಷ್ಣುವು ಕಪ್ಪು ಸಾಲಿಗ್ರಾಮ ಶಿಲೆಯಾಗಿ ರೂಪತಾಳುತ್ತಾನೆ. ಮತ್ತು ಮುಂದೆ ತ್ರೇತಾಯುಗದಲ್ಲಿ ರಾಮವಾತಾರದಲ್ಲಿ ಸೀತೆಯಿಂದ ದೂರಾಗುತ್ತಾನೆ.
ವಿಷ್ಣುವಿನ ಆಶೀರ್ವಾದದಿಂದ ವೃಂದಾ ತುಳಸಿ ಎಂಬ ಪವಿತ್ರ ಗಿಡವಾಗಿ ಜನ್ಮ ತಳೆದು ಪ್ರಭೋದಿನಿ ಏಕಾದಶಿಯಂದು ಸಾಲಿಗ್ರಾಮ ರೂಪಿ ವಿಷ್ಣುವನ್ನು ವರಿಸುತ್ತಾಳೆ. ಇದನ್ನೇ ನಾವು ಇಂದಿಗೂ ಕಿರು ದೀಪಾವಳಿಯಂದು ವಿಷ್ಣು -ತುಳಸಿ ವಿವಾಹವೆಂದು ಬಹಳ ಶ್ರದ್ದಾ ಭಕ್ತಿಯಿಂದ ಆಚರಿಸುವುದು.
ವಿಷ್ಣು ತುಳಸಿ ವಿವಾಹದಂದು ಉಪವಾಸವಿದ್ದು ತುಳಸಿ ಕಟ್ಟೆಯ ಮುಂದೆ ಸಾರಿಸಿ, ತುಳಸಿ ಗಿಡ ಹಾಗೂ ಕಪ್ಪು ಸಾಲಿಗ್ರಾಮ ಅಥವಾ ಕೃಷ್ಣನ ವಿಗ್ರಹಕ್ಕೆ ಮಜ್ಜನ ಮಾಡಿಸಿ, ಮಂಗಳ ದ್ರವ್ಯಗಳಿಂದ ಅಲಂಕರಿಸಿ ,ತುಳಸಿ ,ಕೃಷ್ಣ ವಿಗ್ರಹ ಅಥವಾ ಸಾಲಿಗ್ರಾಮವನ್ನು ಹತ್ತಿ ಮಾಲೆಯಿಂದ ಸುತ್ತುವರೆದು, ದೀಪದಿಂದ ಅಲಂಕರಿಸಿ, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುವುದು ಪದ್ದತಿ.










