ನಾಡು,ನುಡಿ, ನೆಲ ಮತ್ತು ಜಲದ ರಕ್ಷಣೆಯ ಹೋರಾಟಕ್ಕೆ ಬಲ ಬರಬೇಕಾದರೆ ಎಲ್ಲಾ ಕನ್ನಡ ಪರ ಸಂಘಟನೆಗಳೂ ಒಗ್ಗೂಡಿ ಒಂದೇ ವೇದಿಕೆಗೆ ಬರಬೇಕು: ಕೆ.ಎಂ.ಲಿಂಗೇಗೌಡ…

345
firstsuddi

ಚಿಕ್ಕಮಗಳೂರು:ನಾಡು,ನುಡಿ, ನೆಲ ಮತ್ತು ಜಲದ ರಕ್ಷಣೆಯ ಹೋರಾಟಕ್ಕೆ ಬಲ ಬರಬೇಕಾದರೆ ಎಲ್ಲಾ ಕನ್ನಡ ಪರ ಸಂಘಟನೆಗಳೂ ಒಗ್ಗೂಡಿ ಒಂದೇ ವೇದಿಕೆಗೆ ಬರಬೇಕು ಎಂದು ನವಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎಂ.ಲಿಂಗೇಗೌಡ ಸಲಹೆ ಮಾಡಿದರು.ನವಕರ್ನಾಟಕ ಯುವಶಕ್ತಿ ಸಂಘಟನೆಯ ಜಿಲ್ಲಾ ಘಟಕ ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕನ್ನಡ ಪರ ಸಂಘಟನೆಗಳು ವಿಭಜನೆಗೊಂಡು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದಾಗಿ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಯ ಹೋರಾಟ ಹರಿದು ಹಂಚಿ ಹೋಗಿದೆ, ಇದರಿಂದಾಗಿ ಪ್ರಬಲ ಹೋರಾಟ ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಈ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ನಾಡು, ನುಡಿ, ನೆಲ, ಜಲದ ವಿವಾದ ಮತ್ತು ಸಮಸ್ಯೆ ಇನ್ನೂ ಬಗೆಹರಿಯದೆ ಜೀವಂತವಾಗಿದೆ ಎಂದ ಅವರು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಎಲ್ಲಾ ಕನ್ನಡ ಪರ ಸಂಘಟನೆಗಳ ಮುಖಂಡರೂ ಅರ್ಥಮಾಡಿಕೊಂಡು ಒಗ್ಗೂಡಿ ಒಂದೇ ವೇದಿಕೆಗೆ ಬಂದರೆ ಪ್ರಬಲವಾಗಿ ಹೋರಾಟ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ನಿನ ಜಂಟಿ ಕಾರ್ಯದರ್ಶಿ ಅಜಯಕುಮಾರ್ ಎಲ್ಲಾ ಕನ್ನಡ ಪರ ಸಂಘಟನೆಗಳೂ ಒಗ್ಗೂಡಿ ಹೋರಾಟ ನಡೆಸಿದರೆ ಮಾತ್ರ ನಾಡಿನಲ್ಲಿ ಮಾತೃಭಾಷೆ ಉಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸಿ.ಆರ್.ರಘು ಕನ್ನಡದ ಕಾರ್ಯಕ್ರಮಗಳನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ತಮ್ಮ ಸಂಘಟನೆಯಿಂದ ವರ್ಷಪೂರ್ತಿ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯೋತ್ಸವದ ಅಂಗವಾಗಿ ನಡೆಸಲಾದ ಕನ್ನಡ ಅಕ್ಷರಮಾಲೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಸಮಾರಂಭಕ್ಕೆ ಮುನ್ನ ತಾಲ್ಲೂಕು ಕಛೇರಿ ಆವರಣದಿಂದ ಅಂಬೇಡ್ಕರ್ ಭವನದವರೆಗೆ ಕನ್ನಡ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು, ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್ ಕುಮಾರ್, ಕನ್ನಡ ಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ, ನವಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್‍ಗೌಡ, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಗಜೇಂದ್ರ, ತಾಲ್ಲೂಕು ಅಧ್ಯಕ್ಷ ಇಮ್ರಾನ್, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಉಪಸ್ಥಿತರಿದ್ದರು.