ನಮ್ಮ ದುಡಿಮೆಯಲ್ಲಿ ಕನಿಷ್ಟ ಹಣವನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜದ ಋಣ ತೀರಿಸಬೇಕು: ಜಲೀಲ್ ಸಾಹೇಬ್…

328
firstsuddi

ಚಿಕ್ಕಮಗಳೂರು: ಸಂಘಟನೆ ಉತ್ತಮವಾಗಿ ಬೆಳೆಯದ ಹೊರತು ನಮ್ಮ ಬೇಡಿಕೆಗಳು ಈಡೇರುವುದಿಲ್ಲ. ನಾವು ಸಂಘದಿಂದ ತ್ವರಿತ ಲಾಭದ ಬಗ್ಗೆ ಚಿಂತಿಸುತ್ತೇವೆ. ಯಾವುದೇ ಕೆಲಸದಲ್ಲಿ ತ್ವರಿತ ಲಾಭ ಸಾಧ್ಯವಿಲ್ಲ. ನಮ್ಮ ನಿರಂತರವಾದ ಪ್ರಯತ್ನ ಹಾಗೂ ಕಾರ್ಯಕ್ರಮಗಳಿಂದಷ್ಟೇ ಯಶಸ್ಸು ಸಾಧ್ಯ. ಇಂದು ರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಪಿಂಜಾರ ಸಮಾಜ ಇರುವ ಬಗ್ಗೆ ಗಮನ ಇರುವುದಿಲ್ಲ. ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ಸಂಘಟನೆಯನ್ನು ಬಲಪಡಿಸುವ ಮೂಲಕ ನಮ್ಮ ಶಕ್ತಿಯನ್ನು ಬೆಳೆಸಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಪ್ರಗತಿ ಸಾಧ್ಯವಿಲ್ಲ. ಶ್ರಮ ಇಲ್ಲದ ದುಡಿಮೆ ಜೀವನಕ್ಕೆ ಒಳ್ಳೆಯದಲ್ಲ, ನಮ್ಮ ದುಡಿಮೆಯಲ್ಲಿ ಕನಿಷ್ಟ ಹಣವನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜದ ಋಣ ತೀರಿಸಬೇಕೆಂದು ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಜಲೀಲ್ ಸಾಹೇಬರು ಕರೆ ನೀಡಿದರು.
ಅವರು ಇತ್ತಿಚೆಗೆ ರಾಮನಹಳ್ಳಿಯ ಶಾದಿ ಮಹಲ್‍ನಲ್ಲಿ ನಡೆದ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕಕ್ಕೆ ನೂತನ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಪಿಂಜಾರ ಸಮುದಾಯದ ನಾವುಗಳು ಪಿಂಜಾರ್ ಮತ್ತು ನದಾಫ್ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದೇವೆ. ಉನ್ನತ ಹುದ್ದೆಯಲ್ಲಿರುವವರು ತಮ್ಮ ಜಾತಿ ಹೆಸರನ್ನು ಹೇಳಿಕೊಳ್ಳುವುದಕ್ಕು ನಾಚಿಕೆ ಪಡುತ್ತಾರೆ. ಇದರಿಂದ ಸಮಾಜದ ಏಳಿಗೆ ಕುಂಟಿತಗೊಂಡಿದೆ. ಇಬ್ರಾಹಿಂ ಸಾಹೇಬರವರು ಕರ್ನಾಟಕ ರಾಜ್ಯ ನದಾಫ್ ಮತ್ತು ಪಿಂಜಾರ ಸಂಘವನ್ನು ಕಟ್ಟಿ ಬೆಳೆಸಿಸುವ ಮೂಲಕ ಸಮಾಜದ ಜಾಗೃತಿಗೆ ಕಾರಣಿಭೂತರಾಗಿದ್ದಾರೆ. ಇವರು ಸಂಘವನ್ನು ಕಟ್ಟದಿದ್ದರೆ ನಾವು ಒಗ್ಗೂಡಲು ಸಾಧ್ಯವಿರಲಿಲ್ಲ, ಇನ್ನು ಮುದೆ ನದಾಫ್ ಅಥವಾ ಪಿಂಜಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ ಎಂದು ಹೇಳಿದರು.
ನಮ್ಮ ಸೋಲಿಗೆ ನಮ್ಮನ್ನು ನಾವು ನಿಂದಿಸಿಕೊಳ್ಳುತ್ತಿರುತ್ತೇವೆ. ಮೊದಲು ಪ್ರಯತ್ನ ಮಾಡದೆ ಯಾವ ಯಶಸ್ಸು ಸಾಧ್ಯವಿಲ್ಲ. ನಿರಂತರ ಪರಿಶ್ರಮದಿಂದಷ್ಟೇ ಸಾಪಲ್ಯತೆ ಪಡೆಯಲು ಸಾಧ್ಯ. ಸೋಲಿನಿಂದ ಕಂಗೆಡದೆ, ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ. ರಾಜ್ಯದ್ಯಂತ ಮೂವತ್ತು ಲಕ್ಷ ಪಿಂಜಾರ ಜನ ಸಂಖ್ಯೆ ಇದ್ದರು ಸಂಘದಲ್ಲಿ ಇಪ್ಪತ್ತು ಸಾವಿರ ಅಧಿಕೃತ ಸದಸ್ಯರಿಲ್ಲ, ಇದು ಎಂತಹ ವಿಪರ್ಯಾಸ. ನಾವು ಸಂಘಟಿತರಾಗಿ ಏಳಿಗೆಯಾಗಲು ಮೊದಲು ಸಂಘದ ಸದಸ್ಯರಾಗಬೇಕಾಗಿದೆ. ಇದಕ್ಕಾಗಿ ಸದಸ್ಯತ್ವದ ಆಂದೋಲನ ಮೊದಲು ಆಗಬೇಕಿದೆ. ಸದಸ್ಯತ್ವದ ಆಂದೋಲನ ಆಗದ ಹೊರತು ಯಾವ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ನಾವು ನಿಶ್ಯಕ್ತರಾಗುತ್ತೇವೆ. ಸಂಘವನ್ನು ಬಲಿಷ್ಟಗೊಳ್ಳದೆ ನಮ್ಮಲ್ಲಿ ಒಗ್ಗಟ್ಟು ಬರುವುದಿಲ್ಲ. ಅಲ್ಲದೆ ವ್ಯಕ್ತಿ ಶಿಕ್ಷಣದಿಂದ ಸ್ವಾವಲಂಭನೆಯಾಗುತ್ತಾನೆ, ಸ್ವಾವಲಂಭನೆಯಿಂದ ಆರ್ಥಿಕ ಸದೃಡತೆ ಪಡೆಯಲು ಸಾಧ್ಯ ಎಂದು ಹೇಳಿದರು.
ಸಂಘದ ಸದಸ್ಯರಾದವರಿಗೆ ಶ್ರದ್ದೆ ಇರಬೇಕು. ನಾವು ಇಂದು ಹಾಕಿದ ಗಿಡ ನಮಗೆ ನಾಳೆ ನೆರಳು ಕೊಡುವುದಿಲ್ಲ, ನಮ್ಮ ಮುಂದಿನ ಪೀಳಿಗೆ ನರೆಳು ನೀಡುತ್ತದೆ ಎಂಬಂತಹ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಒಂದು ಸಂಘವನ್ನು, ಜನಾಂಗವನ್ನು, ಸಮಾಜವನ್ನು, ಕಟ್ಟಲು ಸಾಧ್ಯ. ಸಂಘದ ಪದಾಧಿಕಾರಿಗಳು ತಮ್ಮ ಕನಿಷ್ಟ ಸಮಯವನ್ನು ಇಂದಿನ ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿಕೊಳ್ಳುವ ಮೂಲಕ ಸದಸ್ಯರನ್ನು ಸಂಘಟಿಸುವ ಕೆಲಸ ಮಾಡಬೇಕು. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಮಾತ್ರ, ಉತ್ತಮ ಮನೆ ಮತ್ತು ಸಮಾಜವನ್ನು ಕಟ್ಟಲು ಸಾಧ್ಯ. ಗಂಡಸರ ಮನಸ್ಸು ಚಂಚಲ ಆದರೆ ಹೆಣ್ಣು ಮಕ್ಕಳು ನಿರ್ದಿಷ್ಟವಾದ ಮನಸ್ಸಿನಿಂದ ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಾರೆ. ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಸಂಘದ ಸಭೆಗಳಿಗೆ ಕರೆದುಕೊಂಡು ಬರುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. ಆಗ ಮಾತ್ರ ನಮ್ಮ ಜೊತೆ ಜೊತೆಯಲ್ಲಿ ಅವರ ಪ್ರಗತಿ ಸಾಧ್ಯ ಎಂದು ಹೇಳಿದರು.
ಸಂಘದಲ್ಲಿ ಸೇವೆ ಮಾಡಲು ವಿಫಲವಾದ ಅವಕಾಶಗಳಿದ್ದು ಸರ್ಕಾರದ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರಿ ಅಧಿಕಾರಿಗಳೊಂದಿಗೆ ಉತ್ತಮ ಭಾಂದವ್ಯ ಇರಬೇಕು. ಇದರಿಂದ ಸರ್ಕಾರಿ ಯೋಜನೆಗಳನ್ನು ನಮ್ಮ ಸಮಾಜದ ಕಟ್ಟಕಡೆಯ ಬಂಧುವಿಗೆ ತಲುಪಿಸಲು ಸಾಧ್ಯ. ನಮಗೆ ಪಿಂಜಾರ ಜಾತಿ ದೃಡಿಕರಣ ಪತ್ರ ನೀಡಲು ಸಂಬಂಧಪಟ್ಟ ಕಛೇರಿಯ ಅಧಿಕಾರಿಗಳು ಸತಾಯಿಸುತ್ತಿದ್ದು, ಸ್ಥಳ ಪರಿಶೀಲನೆ ಮಾಡಿ ಜಾತಿ ದೃಡಿಕರಣ ಪತ್ರ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯಿಂದ ಆದೇಶವಿದ್ದರು ಅದು ಪಾಲನೆಯಾಗುತ್ತಿಲ್ಲ. ಕಂದಾಯ ಇಲಾಖೆಯಿಂದಲೇ ಈ ಆದೇಶವನ್ನು ಜಾರಿಗೊಳಿಸಿದರೆ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ಚುನಾವಣಾಧಿಕಾರಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಪಿಂಜಾರ, ಸದಾಫ್ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಹಸನ್ ಪೀರ್ ಸಾಹೇಬರವರು ಜಿಲ್ಲಾಧ್ಯಕ್ಷರಾಗಿ ಖಲಂದರ್ ಸಿ.ಪಿ, ಉಪಾಧ್ಯಕ್ಷರಾಗಿ ಷರೀಪ್ ಜಾನ್, ರಹಿಂ, ಪ್ರಧಾನ ಕಾರ್ಯದರ್ಶಿಯಾಗಿ ವಿನ್ನು ಸಿ.ಆರ್, ಸಹ ಕಾರ್ಯದರ್ಶಿಯಾಗಿ ದಾದಾ ಪೀರ್, ಖಜಾಂಚಿಯಾಗಿ ನಜೀರ್ ಸಿ.ಬಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ ಲತೀಫ್, ಜಾವೀದ್, ಹುಸೇನ್, ರಜಾಕ್, ಅಲೀಷಾ, ಗೌಸ್ ಫೀರ್, ಷರೀಪ್, ಅನ್ವರ್, ಗೌಸ್, ಬುಡೇನ್ ಸಾಬ್, ಕರೀಂಸಾಬ್, ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಮಹಮ್ಮದ್ ಆಲಿ, ಬಾಬು, ದಾದಾ ಪೈರೋಜ್, ನಾಸೀರ್ ಹುಸೇನ್, ಅವಿರೋಧವಾಗಿ ಆಯ್ಕೆಯನ್ನು ಅನುಮೋದಿಸಿ, ಸಂಘದ ಕಡತಗಳನ್ನು ಹಸ್ತಾಂತರಿಸುವ ಮೂಲಕ ನೂತನ ಸದಸ್ಯರಿಗೆ ಶುಭ ಹಾರೈಸಿದರು.