ಚಿಕ್ಕಮಗಳೂರು:ಯುವಜನತೆ ತಮ್ಮ ವೈಯಕ್ತಿಕ ಬದುಕಿಗಷ್ಟೇ ಸೀಮಿತವಾಗದೇ ಸಮಾಜ ಮತ್ತು ದೇಶದ ಅಭಿವೃದ್ದಿಗೂ ಮುಂದಾಗಬೇಕು ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯಕುಮಾರ್ ಸಲಹೆ ಮಾಡಿದರು.
ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ ನಗರದ ಕಾಂಗ್ರೇಸ್ ಕಛೇರಿಯಲ್ಲಿ ಬುಧವಾರ ಏರ್ಪಡಿಸಿದ್ದ “ವಿಭಿನ್ನ ವಿಚಾರಗಳ ಮುಖಾಮುಖಿ” ಯುವ ಜನತೆಯೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನತೆ ಈ ದೇಶದ ಆಧಾರ ಸ್ತಂಭ, ರಾಷ್ಟ್ರದ ಭವಿಷ್ಯ, ಮುಂದೆ ನಾಯಕರಾಗಿ ದೇಶವನ್ನು ಮುನ್ನಡೆಸಬೇಕಾದವರು, ಅವರು ತಮ್ಮ ಬದುಕಿಗಷ್ಟೇ ಸೀಮಿತವಾದರೆ ರಾಷ್ಟ್ರದ ಭವಿಷ್ಯ ಮಂಕಾಗುತ್ತದೆ ಎಂದು ಎಚ್ಚರಿಸಿದರು.
ಯುವಜನತೆ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಬೇಕು ತಮ್ಮ ಸ್ವಂತದ ಬದುಕಿನ ಜೊತೆಗೆ ದೇಶದ ಆಗುಹೋಗುಗಳತ್ತಲೂ ಗಮನ ಹರಿಸಬೇಕು, ರಾಷ್ಟ್ರದ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸಬೇಕು, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್ ಯುವ ಜನತೆಯಲ್ಲಿ ದೇಶದ ಬಗ್ಗೆ ಅಭಿಮಾನ ಮತ್ತು ತಮ್ಮ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿಭಿನ್ನ ವಿಚಾರಗಳು ಮತ್ತು ವಿಷಯಗಳ ಕುರಿತು ಯುವಜನತೆಯೊಂದಿಗೆ ವೇದಿಕೆಯಲ್ಲಿದ್ದ ಪಕ್ಷದ ಮುಖಂಡರು ಸಂವಾದ ನಡೆಸಿದರು.
ಮಹಿಳಾ ಕಾಂಗ್ರೇಸ್ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಹರ್ಷವರ್ಧನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ, ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ರಾಹಿಲ್ ಶರೀಫ್, ಯುವ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿ ಕಿರಣ್ ಉಪಸ್ಥಿತರಿದ್ದರು.











