ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿನ್ನೆ ನಿಮ್ಹಾನ್ಸ್ ಆಸ್ಪತ್ರಗೆ ಭೇಟಿ ನೀಡಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ವೇಣುಗೋಪಾಲರ ಆರೋಗ್ಯವನ್ನು ವಿಚಾರಿಸಿದರು. ವೇಣುಗೋಪಾಲ ಅವರ ತಾಯಿ ಟೇಲರಿಂಗ್ ವೃತ್ತಿ ಮಾಡುತ್ತಿದ್ದು, ವೇಣುಗೋಪಾಲ ಎಸ್.ಎಸ್.ಎಲ್.ಸಿ ಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ ಹಾಗೂ ತಡರಾತ್ರಿವರೆಗೂ ಮೊಬೈಲ್ ಬಳಸುತ್ತಿದ್ದ . ಅದಕ್ಕೆ ತಾಯಿ ಬುದ್ದಿ ಮಾತು ಹೇಳಿದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯುವಕನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬುದ್ದಿ ಮಾತು ಹೇಳುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ವೇಣುಗೋಪಾಲ್ ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ. ಆ ಕ್ಷಣದಲ್ಲಿ ಏನು ನಡೆಯಿತು ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾನೆ.
ಈ ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿಮ್ಮ ಪೋಷಕರ ಕಾಳಜಿ ಮತ್ತು ಭಾವನೆಗಳನ್ನು ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದು, ಪರೀಕ್ಷೆಯ ಸಮಯ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಮಕ್ಕಳು ಯಾವುದೇ ಒತ್ತಡವಿಲ್ಲದೆ ಅಭ್ಯಾಸ ಮಾಡುವ ವಾತಾವರಣವನ್ನು ಶಾಲೆ/ ಕಾಲೇಜುಗಳು ಹಾಗೂ ಪೋಷಕರು ನಿರ್ಮಿಸಬೇಕು. ಪೋಷಕರು ಮತ್ತು ಶಿಕ್ಷಕರ ಸಲಹೆಯನ್ನು ವಿದ್ಯಾರ್ಥಿಗಳು ಸ್ವೀಕರಿಸಿ, ಓದಿನ ಕಡೆಗೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.











