ಚಿಕ್ಕಮಗಳೂರು: ಆಧುನೀಕರಣ ಮತ್ತು ಜಾಗತೀಕರಣದಿಂದಾಗಿ ಸಮಾಜದಲ್ಲಿ ಸಂಬಂಧಗಳು, ಮನುಷ್ಯತ್ವ ಹಾಗೂ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿರುವ ಸಾಮಾನ್ಯ ಸಂಗತಿ.
ಇದಕ್ಕೆ ಅಪವಾದವೆಂಬಂತೆ ತಮಗೆ ಸಂಬಂದವೇ ಇಲ್ಲದ ನಿರ್ಗತಿಕ ವ್ಯಕ್ತಿಯೋರ್ವರನ್ನು ಇಳಿವಯಸ್ಸಿನಲ್ಲಿ ಸಲಹುವುದರ ಜೊತೆಗೆ ಅವರ ಅಂತ್ಯಕ್ರಿಯೆಯನ್ನೂ ಮಾಡುವ ಮೂಲಕ ತಾಲ್ಲೂಕಿನ ದಿಣ್ಣೇಕೆರೆ ಗ್ರಾಮಸ್ಥರು ಮಾನವೀಯತೆಯನ್ನು ಮೆರೆದಿದ್ದಾರೆ.
ಕಳೆದ ಮೂರ್ನಾಲ್ಕು ದಶಕಗಳ ಹಿಂದೆ ರಾಮಯ್ಯ ಎಂಬ ವ್ಯಕ್ತಿಯೋರ್ವರು ದಿಣ್ಣೇಕೆರೆಗೆ ಮೈಸೂರು ಭಾಗದಿಂದ ಬಂದು ನೆಲೆಸಿದ್ದರು, ಹೆಂಡತಿ, ಮಕ್ಕಳು, ಬಂಧು ಬಳಗ ಯಾರೂ ಇಲ್ಲದ ಅವರು ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು.
ವಯಸ್ಸಾದ ನಂತರ ದುಡಿಯಲು ಶಕ್ತಿ ಇಲ್ಲದೇ ಅಸಹಾಯಕರಾದ ಅವರನ್ನು ಕೆಲವು ವರ್ಷಗಳಿಂದ ಗ್ರಾಮಸ್ಥರು ತಮ್ಮ ಮನೆಗಳಿಂದ ಊಟ, ಉಪಹಾರ ನೀಡಿ ಸಲಹುತ್ತಿದ್ದರು.
ಹೆಂಡತಿ ಮಕ್ಕಳು ಅಥವಾ ಸಂಬಂಧಿಕರಿದಲ್ಲದೆ ನಿರ್ಗತಿಕರಾಗಿದ್ದ ಅವರನ್ನು ನಗರದ ಜೀವನ ಸಂಧ್ಯಾ ವೃದ್ದಾಶ್ರಮಕ್ಕೆ ದಾಖಲಿಸಲು ಗ್ರಾಮಸ್ಥರು ಮುಂದಾಗಿದ್ದರು, ಆ ವೇಳೆ ನಾನು ಕೈಲಾಗುವವರೆಗೂ ದುಡಿದು ತಿನ್ನುತ್ತೇನೆ, ಇನ್ನೊಬ್ಬರ ಹಂಗಿನಲ್ಲಿ ಮಾತ್ರ ಬದುಕುವುದಿಲ್ಲ ಎಂದು ಆ ವ್ಯಕ್ತಿ ತಿಳಿಸಿದ ಹಿನ್ನೆಲೆಯಲ್ಲಿ ವೃದ್ದಾಶ್ರಮಕ್ಕೆ ಸೇರಿಸಿರಲಿಲ್ಲ.
ಕಳೆದ ಮೂರು ದಿನಗಳ ಹಿಂದೆ ವಯೋ ಸಹಜವಾದ ಅನಾರೋಗ್ಯದಿಂದ ಅಸ್ವಸ್ಥರಾದ ರಾಮಯ್ಯ (80) ಅವರನ್ನು ಗ್ರಾಮಸ್ಥರೇ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಆ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನರಾದರು, ಈ ವೇಳೆ ಒಗ್ಗೂಡಿದ ಗ್ರಾಮಸ್ಥರು ಮೂರ್ನಾಲ್ಕು ದಶಕಗಳಿಂದ ತಮ್ಮ ನಡುವೆ ಇದ್ದ ವ್ಯಕ್ತಿಯನ್ನು ಅನಾಥ ಶವವಾಗಿಸುವುದು ಬೇಡ ಎಂದು ನಿರ್ಧರಿಸಿ ತಾವೇ ಅಂತ್ಯ ಸಂಸ್ಕಾರಕ್ಕೆ ಮುಂದಾದರು.
ಈ ವೇಳೆ ಕೂದುವಳ್ಳಿಯ ಕೆಲವು ಗ್ರಾಮಸ್ಥರೂ ದಿಣ್ಣೇಕೆರೆಯವರೊಂದಿಗೆ ಕೈಜೋಡಿಸಿದರು, ಬುಧವಾರ ತಮ್ಮ ತಮ್ಮಲ್ಲೇ ಹಣ ಸಂಗ್ರಹಿಸಿದ ಗ್ರಾಮಸ್ಥರು ಮಧ್ಯಾಹ್ನದ ವೇಳೆಗೆ ಉಪ್ಪಳ್ಳಿ ರಸ್ತೆಯ ಮುಕ್ತಿಧಾಮ ಚಿತಾಗಾರಕ್ಕೆ ಶವವನ್ನು ಕೊಂಡೊಯ್ದು ಧಾರ್ಮಿಕ ವಿಧಿವಿಧಾನಗಳ ನಡುವೆ ತಾವೇ ಅಂತ್ಯಕ್ರಿಯೆ ನೆರವೇರಿಸಿ ಸಮಾಜದಲ್ಲಿ ಇನ್ನೂ ಮಾನವೀಯತೆ ಉಳಿದಿರುವುದನ್ನು ಸಾಬೀತುಪಡಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥ ಡಿ.ಎಂ.ಮಂಜುನಾಥ ಸ್ವಾಮಿ ಮೃತರ ಮುಂದಿನ ಅಪರ ಕರ್ಮಗಳನ್ನು ಗ್ರಾಮಸ್ಥರೇ ನೆರವೇರಿಸುವುದರ ಜೊತೆಗೆ ತಿಥಿಯ ದಿನ ಜೀವನ ಸಂಧ್ಯಾ ವೃದ್ದಾಶ್ರಮದ ನಿವಾಸಿಗಳಿಗೆ ಅವರ ಹೆಸರಿನಲ್ಲಿ ಅನ್ನದಾನ ಮಾಡಲಾಗುವುದು ಎಂದು ತಿಳಿಸಿದರು.
Home ಸ್ಥಳಿಯ ಸುದ್ದಿ ವ್ಯಕ್ತಿಯೋರ್ವರನ್ನು ಇಳಿವಯಸ್ಸಿನಲ್ಲಿ ಸಲಹುವುದರ ಜೊತೆಗೆ ಅವರ ಅಂತ್ಯಕ್ರಿಯೆಯನ್ನೂ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದ ದಿಣ್ಣೇಕೆರೆ ಗ್ರಾಮಸ್ಥರು…










