ಚಿಕ್ಕಮಗಳೂರು: ಯುವಜನತೆ ವಿದ್ಯಾರ್ಥಿ ದೆಸೆಯಲ್ಲಿ ಓದಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ಮಲೆನಾಡು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್ ಸಲಹೆ ಮಾಡಿದರು.
ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಸುಂದರಮ್ಮ ಶಂಕರಮೂರ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ, ಪಠ್ಯ-ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ, ಅವುಗಳ ಹಿಂದೆ ಹೋದರೆ ಓದು ಕುಂಠಿತವಾಗುತ್ತದೆ ಎಂದು ಎಚ್ಚರಿಸಿದ ಅವರು ಯುವಜನತೆ ವಿದ್ಯಾರ್ಜನೆಯ ಜೊತೆಗೆ ಸಾಹಿತಿ, ಸಂಗೀತಗಾರ, ಕಲಾವಿದ ಅಥವಾ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಆದರೆ ಅದಕ್ಕಿಂತ ಮುಖ್ಯವಾಗಿ ಅವರು ಶಿಕ್ಷಣವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಕೇವಲ ಹಣಗಳಿಕೆ ಅಥವಾ ಉದ್ಯೋಗಕ್ಕೋಸ್ಕರ ಓದಬಾರದು, ಬದುಕನ್ನು ಕಟ್ಟಿಕೊಡುವಂತಹ ಶಿಕ್ಷಣವನ್ನು ಪಡೆಯಬೇಕು ಎಂದು ತಿಳಿಸಿದರು.
ಸಂಸ್ಥೆಯ ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್ ಮಾತನಾಡಿ ಯುವಜನತೆ ಶಿಕ್ಷಣವಂತರಾಗುವುದರ ಜೊತೆಗೆ ಸುಸಂಸ್ಕೃತರಾಗಿಯೂ ರೂಪುಗೊಳ್ಳಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಉನ್ನತ ವ್ಯಾಸಂಗಕ್ಕೆ ಪದವಿಪೂರ್ವ ಶಿಕ್ಷಣ ಪ್ರಮುಖವಾದ ಘಟ್ಟ, ಅಲ್ಲಿ ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಮುಂದಿನ ದಾರಿ ಸುಗಮವಾಗುತ್ತದೆ ಎಂದರು.
ಪ್ರಾಚಾರ್ಯೆ ಎಂ.ಬಿ.ಜಯಶ್ರೀ ವಾರ್ಷಿಕ ವರದಿಯನ್ನು ಮಂಡಿಸಿದರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ದಾನಿ ಸುಂದರಮ್ಮ ಶಂಕರಮೂರ್ತಿ, ಸಂಸ್ಥೆಯ ನಿರ್ದೇಶಕ ಕನಕರಾಜ್, ಪದನಿಮಿತ್ತ ಸದಸ್ಯೆ ಉಮಾನಾಗೇಶ್, ಆಡಳಿತಾಧಿಕಾರಿ ಎಸ್.ಶಾಂತಕುಮಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅದಿತಿ ಕಾರ್ಯಕ್ರಮವನ್ನು ನಿರೂಪಿಸಿದರು, ಆದರ್ಶ್ ಸ್ವಾಗತಿಸಿದರು, ಹೆಚ್.ಎಂ.ಶಿವಾನಿ ವಂದಿಸಿದರು.










