ಇಪ್ಪತ್ತನೇ ಶತಮಾನ ಕನ್ನಡ ಸಾಹಿತ್ಯದ ನಿಜವಾದ ಸುವರ್ಣ ಯುಗ :ಡಾ|| ಎನ್.ಎಸ್.ತಾರಾನಾಥ್…

1090
firstsuddi

ಚಿಕ್ಕಮಗಳೂರು:ಇಪ್ಪತ್ತನೇ ಶತಮಾನ ಕನ್ನಡ ಸಾಹಿತ್ಯದ ನಿಜವಾದ ಸುವರ್ಣ ಯುಗ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ|| ಎನ್.ಎಸ್.ತಾರಾನಾಥ್ ಹೇಳಿದರು.
ಬ್ರಾಹ್ಮಣ ಮಹಾಸಭಾ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಹಿತ್ಯ ಪ್ರಸಾರ ಮಾಲೆ ಕಾರ್ಯಕ್ರಮದಲ್ಲಿ ಡಿವಿಜಿ ಅವರ ಜೀವನ ದರ್ಶನ ಮತ್ತು ಸಾಹಿತ್ಯ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
10ನೇ ಶತಮಾನವನ್ನು ಕನ್ನಡ ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗಿದೆ, ಆದರೆ ನಿಜವಾದ ಸುವರ್ಣ ಯುಗ 20ನೇ ಶತಮಾನ ಎಂದ ಅವರು 10ನೇ ಶತಮಾನದಲ್ಲಿ ಪಂಪ, ಪೊನ್ನ, ರನ್ನ, ಜನ್ನ, ನಾಗವರ್ಮ, ಚಾವುಂಡರಾಯ ಸೇರಿದಂತೆ ಆರೇಳು ಜನ ಮಾತ್ರ ಕವಿಗಳಿದ್ದರು, ಆ ಕಾಲದಲ್ಲಿ ಮಾಹಾಕಾವ್ಯಗಳು ಮಾತ್ರ ರಚಿತವಾದವು ಎಂದರು.
ಇಪ್ಪತ್ತನೇ ಶತಮಾನದಲ್ಲಿದಂತಹ ಬರಹಗಾರರು, ಸಾಹಿತಿಗಳ ಸಂಖ್ಯೆ ಅಸಂಖ್ಯಾತ, ಮಾಸ್ತಿ, ಬೇಂದ್ರೆ, ಶಿವರಾಮಕಾರಂತರು, ಡಿವಿಜಿ, ಜಿ.ಪಿ.ರಾಜರತ್ನಂ, ಅನಕೃ, ತರಾಸು, ಟಿ.ಪಿ.ಕೈಲಾಸಂ, ಶ್ರೀರಂಗ ಸೇರಿದಂತೆ ಸಾವಿರಾರು ದೊಡ್ಡ ಸಾಹಿತಿಗಳು, ಕವಿಗಳು ಇದ್ದರು, ಆ ಕಾಲದಲ್ಲಿ ಸಾಹಿತ್ಯದ ಎಲ್ಲಾ ಪ್ರಾಕಾರಗಳೂ ಹೊರಬಂದವು ಎಂದು ತಿಳಿಸಿದರು.
ಇಪ್ಪತ್ತನೇ ಶತಮಾನದ ವೈಶಿಷ್ಟ್ಯವೆಂದರೆ ಅದು ಒಬ್ಬ ಕವಿ ಅಥವಾ ಸಾಹಿತಿಯ ಕಾಲಮಾನವಲ್ಲ, ನಾಟಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಒಬ್ಬಬ್ಬೊರು ಒಂದೊಂದು ರೀತಿಯ ಸಾಧನೆಯನ್ನು ಮೆರೆದರು ಎಂದ ಅವರು ಅಂತವರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವಂತವರು ಬಹುಶೃತರಾದ ಮೇರುಸದೃಷ ವ್ಯಕ್ತಿತ್ವದ ಡಿವಿಜಿ ಅವರು ಎಂದರು.
ಡಿವಿಜಿ ಬಡತನದಲ್ಲೇ ಸಂತಸವನ್ನು ಕಂಡವರು, ಕವಿ, ಸಾಹಿತಿ ಮತ್ತು ದಾರ್ಶನಿಕರಾಗಿದ್ದ ಅವರು ವಾಂಙಯ ಮೇರುವಾಗಿದ್ದರು, ಇಂಗ್ಲೀಷ್, ಸಂಸ್ಕøತ, ಕನ್ನಡ, ಹಳೆಗನ್ನಡ, ಛಂದಸ್ಸುಗಳನ್ನು ಬಲ್ಲವರಾಗಿದ್ದ ಡಿವಿಜಿ ಕಲೆ, ಸಾಹಿತ್ಯ, ನಾಟಕ, ಪ್ರಬಂಧ, ಕಾವ್ಯ, ನೀತಿಕಾವ್ಯ, ಕಗ್ಗ, ಸಂಶೋಧನೆ, ರಾಜ್ಯಶಾಸ್ತ್ರ ಮತ್ತು ತತ್ವಶಾಸ್ತ್ರ ಸೇರಿದಂತೆ ಎಲ್ಲಾ ಪ್ರಾಕಾರಗಳಲ್ಲೂ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ಹಿರಿಯ ಸಾಹಿತಿಗಳ ಜೀವನ ಮತ್ತು ಸಾಧನೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಹಿರಿಯರಿಗೆ ಮತ್ತೊಮ್ಮೆ ನೆನಪಿಸುವ ಉದ್ದೇಶದಿಂದ ಬ್ರಾಹ್ಮಣ ಮಹಾಸಭಾ ಸಾಹಿತ್ಯ ಪ್ರಸಾರ ಮಾಲೆಯನ್ನು ಆರಂಭಿಸಿದ್ದು, ಅದರ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ರೀತಿ ಮುಂದೆ ವರ್ಷಕ್ಕೆ ಎರಡು ಮೂರು ಸಾಹಿತಿಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.
ಸಾಹಿತಿ ಬೆಳವಾಡಿ ಮಂಜುನಾಥ್ ತಾರಾನಾಥ್ ಅವರನ್ನು ಸಭೆಗೆ ಪರಿಚಯಿಸಿದರು, ಗೋಪಾಲಕೃಷ್ಣ ಡಿವಿಜಿ ಅವರು ರಚಿಸಿರುವ ಗೀತೆ ಹಾಗೂ ಸೌಭಾಗ್ಯ ಶೇಷಾದ್ರಿ ಡಿವಿಜಿ ಅವರ ನಮನ ಗೀತೆಯನ್ನು ಹಾಡಿದರು.
ಬ್ರಾಹ್ಮಣ ಮಹಾಸಭಾ ವತಿಯಿಂದ ತಾರಾನಾಥ್ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕøತರಾದ ಸಾಹಿತಿ ಬೆಳವಾಡಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಷಿ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಅಶ್ವಿನ್ ಸ್ವಾಗತಿಸಿದರು, ಸುಮಾ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು, ಎ.ಎನ್.ಮೂರ್ತಿ ವಂದಿಸಿದರು.