ಮೂಡಿಗೆರೆ: ವರ್ಷಗಳಲ್ಲಿ ಸುಮಾರು 20 ರಿಂದ 30 ಜಯಂತಿಯನ್ನು ಆಚರಿಸಲು ಅವಕಾಶ ಮಾಡಿಕೊಟ್ಟಂತಹ ಸರ್ಕಾರವು ಇಂದು ಪ್ರಥಮ ಬಾರಿ ಸವಿತ ಮಹರ್ಷಿ ಜಯಂತಿಗೆ ಸರ್ಕಾರದ ವತಿಯಿಂದ ಆಚರಿಸಲು ಅವಕಾಶ ಮಾಡಿದ್ದರಿಂದ ಈ ಸಮುದಾಯದ ಆರ್ಥಿಕ ಮತ್ತು ಅಭಿವೃದ್ಧಿಯ ಕುರಿತು ಚರ್ಚಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಹೇಳಿದರು.
ಮಂಗಳವಾರ ಪಟ್ಟಣದ ಜೆಸಿ ಭವನದಲ್ಲಿ ತಾಲೂಕು ಆಡಳಿತ ಮತ್ತು ಸವಿತಾ ಸಮಾಜದ ವತಿಯಿಂದ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸವಿತಾ ಸಮುದಾಯದವರು ತಮ್ಮ ಸ್ವಾವಲಂಬಿ ದುಡಿಮೆಯ ಮೂಲಕ ಸಮಾಜದಲ್ಲಿ ಮೇಲು ಕೀಳೆಂಬ ತಾರತಮ್ಯವನ್ನು ತೊಲಗಿಸಿ ಸೌಹಾರ್ದತೆ ಮೆರೆಯುವಲ್ಲಿ ಹಾಗೂ ಈ ಸಮಾಜದ ಜನತೆಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಲು ಪ್ರಮುಖ ಪಾತ್ರ ವಹಿಸುತ್ತಾರೆ ನಿಮ್ಮ ಸಮುದಾಯದಲ್ಲಿ ಶ್ರೀಮಂತರಿಗಿಂತ ಬಡವರೆ ಜಾಸ್ತಿಯಾಗಿದ್ದು ಸಮಾಜದಲ್ಲಿ ಇಂತವರ ಏಳಿಗೆಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸವಿತಾ ಸಮಾಜದ ಮುಖಂಡನಾದ ನಾರಾಯಣ್ ಅವರು ತಾಲ್ಲೂಕು ಆಡಳಿತವು ನಮ್ಮ ಸಮುದಾಯಕ್ಕೆ ಒಂದು ಸ್ವಂತ ಕಟ್ಟಡವನ್ನು ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಸ್ಥಾಪಿಸಿದಾಗ ಈ ಕುರಿತು ತಾಲ್ಲೂಕು ಪಂಚಾಯಿತಿಗೆ ಅವಕಾಶವಿರುವುದಿಲ್ಲ ಈ ಕುರಿತು ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಗಮನವನ್ನು ಹರಿಸಿದಲ್ಲಿ ಈ ಸಮುದಾಯಕ್ಕೆ ಸ್ವಂತ ಕಟ್ಟಡಕ್ಕಾಗಿ ಗೋಮಾಳದ ಜಾಗ ಲಭ್ಯವಿದ್ದಲ್ಲಿ ಸಂಘ ಸಂಸ್ಥೆಗಳಿಗೆ ಭವನ ನಿರ್ಮಿಸಲು ಹಾಗೂ ಸ್ವಂತ ಜಾಗ ನೀಡಲು ಪಟ್ಟಣ ಪಂ ಅಧ್ಯಕ್ಷರು ಮತ್ತು ಸದಸ್ಯರಲ್ಲಿ ರತನ್ ಅವರು ಮನವಿ ಮಾಡಿ ಇದರ ಬಗ್ಗೆ ತಾಲ್ಲೂಕು ತಹಸೀಲ್ದಾರರು ಕ್ರಮ ಕೈಗೊಂಡಲ್ಲಿ ನಮ್ಮಿಂದಾದ ಸಹಾಯವನ್ನು ತಮ್ಮ ಸಮುದಾಯಕ್ಕೆ ಮಾಡಲು ಸದಾ ಸಿದ್ಧನಿರುತ್ತೇನೆ ಎಂದು ತಾ.ಪಂ.ಅಧ್ಯಕ್ಷರು ಸಮುದಾಯಕ್ಕೆ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸವಿತಾ ಸಮಾಜದ ಅಧ್ಯಕ್ಷ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ.ಪಂ. ಅಧ್ಯಕ್ಷ ರಮಿಜಾಭಿ, ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್, ಜಿ.ಪಂ. ಸದಸ್ಯ ಶಾಮಣ್ಣ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್‍ಕುಮಾರ್, ಸದಸ್ಯರಾದ ಭಾರತೀ ರವೀಂದ್ರ, ವೀಣಾ ಉಮೇಶ್, ಪ್ರಮಿಳಾ, ಪ.ಪಂ. ಸದಸ್ಯರಾದ ಪಾರ್ವತಮ್ಮ, ಲತಾ ಲಕ್ಷ್ಮಣ್, ಕೆ.ವೆಂಕಟೇಶ್, ಟಿ.ಎ.ಮದೀಶ್, ರಾಮಕೃಷ್ಣ, ಅಕ್ತರ್ ಹುನ್ನಿಸಾ, ಹೊಸಕೆರೆ ರಮೇಶ್, ಶಣ್ಮುಖಾನಂದ, ತ್ರಿಪುರ ಗ್ರಾ.ಪಂ. ರಘು, ಹಂತೂರು ಗ್ರಾ.ಪಂ. ಸದಸ್ಯೆ ಶಕುಂತಳಾ, ಉಪ ತಹಸೀಲ್ದಾರ್ ಸತ್ಯನಾರಾಯಣ್, ಸವಿತಾ ಸಮಾಜದ ಪದಾಧಿಕಾರಿಗಳಾದ ಶಿವಣ್ಣ, ನಾಗೇಶ್, ಪವಿತ್ರಾ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.










