ಕಳಸ: ಕಲಶೇಶ್ವರ ಜಾತ್ರೆಯ ರಥೋತ್ಸವ…

447
firstsuddi

ಕಳಸ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಇಲ್ಲಿಯ ಕಲಶೇಶ್ವರ ದೇವಾಲಯದಲ್ಲಿ ಕಳೆದ ಆರು ದಿನಗಳಿಂದ ಜಾತ್ರೆ ನಡೆಯುತ್ತಿದ್ದು, ಶನಿವಾರ ಶ್ರೀ ಕಲಶೇಶ್ವರನ ಮಹಾರಥೋತ್ಸವ ಸಂಭ್ರಮ ನೆರವೇರಿತು. ಕಳೆದ ಭಾನುವಾರ ಗಣಪತಿ ಪೂಜೆ ಅಂಕುರಾರ್ಪನೆಯೊಂದಿಗೆ ಶುರುವಾದ ಜಾತ್ರಾ ಮಹೋತ್ಸವವು ನಂತರದ ದಿನಗಳಲ್ಲಿ ದ್ವಜಾರೋಹಣ, ವೃಷಭಾರೋಹಣ, ಕೌತುಕೋತ್ಸವ, ಸಿಂಹರೋಹಣ,ಮಹೂರಾರೋಹಣ,ಹಂಸಾರೋಹಣ,ಗಜಾರೋಹಣ ಮುಂತಾದ ಉತ್ಸವಗಳು ನಡೆದು ಶನಿವಾರ ಬ್ರಹ್ಮ ರಥೋತ್ಸವ ರಾತ್ರಿ ಶ್ರೀಮನ್ ಮಹಾರಥೋತ್ಸವ ನಡೆಯಿತು.

ಊರು ತುಂಬೆಲ್ಲಾ ತಳಿರು ತೋರಣಗಳನ್ನು ಕಟ್ಟಲಾಗಿತ್ತು.ಇಡೀ ದೇವಾಲಯ ವಿದ್ಯುತ್ ದೀಪ ಗಳಿಂದ ಶೃಂಗಾರಗೊಂಡಿತ್ತು.ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗಿರಿಜನ, ಗೌಡಲು ಜನಾಂಗ ಸಿದ್ಧಪಡಿಸಿದ ಹೂಗಳಿಂದ ಶೃಂಗರಿಸಲ್ಪಟ್ಟ ಭವ್ಯ ಬ್ರಹ್ಮರಥದಲ್ಲಿ ಶ್ರೀ ಕಲಶೇಶ್ವರ ವಿರಾಜಮಾನ ಆಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದರು.ಮಧ್ಯಾಹ್ನ 12ಕ್ಕೆ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಠಿಸುತ್ತಾ ಛತ್ರಿ,ಚಾಮರ,ಮಂಗಳ ವಾದ್ಯಗಳೊಂದಿಗೆ ಹೂವಿನ ಅಲಂಕಾರದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತು ತರಲಾಯಿತು.ಕಲಶೇಶ್ವರನನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆ ಮಾಡಲಾಯಿತು.ಆ ವೇಳೆ ಭಕ್ತಾಧಿಗಳು ದೇವರಿಗೆ ಫಲ ಪುಷ್ಪಾದಿ ಅರ್ಚನೆ ಮಾಡಿದರು.ತಾವು ಬೆಳೆದ ಕಾಫಿ,ಕಾಳುಮೆಣಸು,ಅಡಕೆ,ಏಲಕ್ಕಿ ಇನ್ನಿತರೆ ಧಾನ್ಯಗಳನ್ನು ರಥಕ್ಕೆ ಎಸೆದು ಹರಕೆ ತೀರಿಸಿಕೊಂಡರು.ತೆಂಗಿನ ಕಾಯಿಯನ್ನು ರಥದ ಚಕ್ರಕ್ಕೆ ಒಡೆದು ನಂತರ ಅಲಂಕೃತಗೊಂಡ ಭವ್ಯ ಬ್ರಹ್ಮರಥವನ್ನು ಶ್ಚೇತ ವಸ್ತ್ರಧಾರಿಗಳು ಎಳೆದರು.
ರಾತ್ರಿ ಪಟ್ಟಣದ ರಾಜಬೀದಿಯಲ್ಲಿ ದೇವರ ಶ್ರೀಮನ್ ಮಹಾರಥೋತ್ಸವ ನಡೆಯಿತು.ರಾಜಬೀದಿಯಲ್ಲಿ ಸಾಗುವಾಗ ಪಟಾಕಿ, ಸಿಡಿಮದ್ದುಗಳು, ವಾಲಗ, ವಿವಿಧ ವೇಷಭೂಷಣದ ವಿನೋದಾವಳಿಗಳು ಕಣ್ಣಿಗೆ ಹಬ್ಬ ತಂದುಕೊಟ್ಟವು.ರಥ ಸಾಗುವ ಜನಸಾಗರ ತಮ್ಮದೇ ಆದ ಲೋಕದಲ್ಲಿದ್ದರು.ಭಕ್ತಿಸಾಗರದಲ್ಲಿ ಕೆಲವರು ಮುಳುಗಿದ್ದರೆ,ಜಾತ್ರೆಯ ಸಂತೆ,ವ್ಯಾಪಾರ ವಾಹಿವಾಟುಗಳಲ್ಲಿ ಮುಳುಗಿದವರು ಇನ್ನೊಂದು ವರ್ಗ.ಹಿಂದು,ಮುಸ್ಲಿಂ,ಕ್ರೈಸ್ತರು ಸಕಲ ಮತ,ಪಂಗಡ,ಜಾತಿಯ ಜನರೂ ಜಾತ್ರೆಯಲ್ಲಿ ಭಾಗವಹಿಸಿ ಭಾವೈಕ್ಯ ಹಾಗೂ ಕೋಮು ಸಾಮರಸ್ಯದ ಸಂಕೇತಕ್ಕೆ ಸಾಕ್ಷಿಯಾಗಿ ಮುನ್ನುಡಿ ಇಟ್ಟಿರುವುದು ಇಲ್ಲಿಯ ಜಾತ್ರೆಯ ಮತ್ತೊಂದು ವಿಶೇಷವಾಗಿತ್ತು.

ಜಾತ್ರೆಗೆ ಕಳಸ ಸುತ್ತಮುತ್ತಲಿನ ಹೊರನಾಡು, ಕುದುರೆಮುಖ, ಜಾಂಬ್ಳೆ, ನೆಲ್ಲಿಬೀಡು, ಕಲ್ಕೋಡು, ಮರಸಣಿಗೆ, ಹಿರೇಬೈಲು, ಕಲ್ಮಕ್ಕಿ, ಜಾವಳಿ, ಹಳುವಳ್ಳಿ, ಮುನ್ನೂರುಪಾಲ್,ಬಸರೀಕಟ್ಟೆ ಮತ್ತಿತರೆಡೆಯಿಂದ ಜನಸಾಗರವೇ ಹರಿದು ಬಂದಿತ್ತು.ಪ್ರತಿಯೊಬ್ಬರು ಶ್ರೀ ಕಲಶೇಶ್ವರನಿಗೆ ತಲೆಬಾಗಿ ಗಂಧ ಪ್ರಸಾದ ಸ್ವೀಕರಿಸಿದರು.ಸ್ಥಳಿಯ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡುವ ಪ್ರವಾಸಿಗರೂ ಜಾತ್ರೆಯಲ್ಲಿ ಭಾಗವಹಿಸಿ ಭಕ್ತಿ ಮೆರೆದರು.ಜಾತ್ರೆ ಹಿನ್ನಲೆಯಲ್ಲಿ ಒಂದೆಡೆ ಜನಸ್ತೋಮವಾದರೆ ಮತ್ತೊಂದೆಡೆ ವಾಹನ ದಟ್ಟಣೆ.ಪ್ರವಾಸಿಗರಿಗೆ ಕಳಸದಿಂದ ಬೇರೆ ಊರುಗಳಿಗೆ ತೆರಳಲು ಕಳಸ ಮುಖ್ಯ ರಸ್ತೆಯನ್ನೆ ಅವಲಂಬಿಸಿದ್ದಾರೆ.ಇದರಿಂದ ರಸ್ತೆ ಸಂಚಾರ ಪ್ರಯಾಸವಾಯಿತು.ಬೆಳಿಗ್ಗೆ ರಥೋತ್ಸವದ ಸಂದರ್ಭ ಹಾಗೂ ರಾತ್ರಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ನಿಷೇದಿಸಲಾಗಿತ್ತು.ಮುಖ್ಯ ರಸ್ತೆಯಲ್ಲಿ ವಾಹನಪಾರ್ಕಿಂಗ್‍ನ್ನು ನಿಷೇದಿಸಲಾಗಿತ್ತು.ರಸ್ತೆಯ ಎರಡೂ ಬದಿಯಲ್ಲಿ ಒಂದು ಕಿ.ಮೀ ಗೂ ಹೆಚ್ಚು ದೂರ ಸಂತೆ ಮಾರುಗಟ್ಟೆಗಳು ಲಗ್ಗೆ ಇಟ್ಟಿದ್ದವು.ವ್ಯಾಪಾರಸ್ಥರು ವರ್ಷದಲ್ಲೊಮ್ಮೆ ಬರುವ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರವನ್ನು ಮಾಡಿದರು.