ಜಾನಪದ ನಮ್ಮ ಸಂಸ್ಕೃತಿಯ ತಾಯಿ ಬೇರು ಅದು ಗಟ್ಟಿಯಾದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ : ಡಾ|| ಮಂಜುಳಾ ಹುಲ್ಲಹಳ್ಳಿ…

403
firstsuddi

ಚಿಕ್ಕಮಗಳೂರು: ಜಾನಪದ ಕಲೆ ಮತ್ತು ಸಂಸ್ಕೃತಿ ಎಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಮಂಜುಳಾ ಹುಲ್ಲಹಳ್ಳಿ ಸಲಹೆ ಮಾಡಿದರು.
ತಾಲ್ಲೂಕು ಕನ್ನಡ ಜಾನಪದ ಪರಿಷತ್ ನಗರದ ಸ್ಪರ್ಧಾ ಕರಿಯರ್ ಅಕಾಡಮಿಯ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾನಪದ ನಮ್ಮಸಂಸ್ಕೃತಿಯ ತಾಯಿ ಬೇರು ಅದು ಗಟ್ಟಿಯಾದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ, ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ನಾವು ಜಾನಪದವನ್ನು ಕಳೆದುಕೊಂಡರೆ ನಮ್ಮ ತನವನ್ನು ಕಳೆದುಕೊಂಡು ಜಗತ್ತಿನೆದುರು ಬರಿಗೈಯಲ್ಲಿ ನಿಲ್ಲ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಜಾನಪದ ಕಲೆ ಮತ್ತು ಸಂಸ್ಕೃತಿ ಎಲ್ಲರ ಬದುಕಿನಲ್ಲಿ ಹಾಸುಹೊಕ್ಕಾದರೆ ಮಾತ್ರ ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್ ಮರೆಯಾಗುತ್ತಿರುವ ಜಾನಪದ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಕನ್ನಡ ಎಂ.ಎ ಪದವಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಏಳು ಚಿನ್ನದ ಪದಕಗಳನ್ನು ಪಡೆದಿರುವ ಕುರುವಂಗಿಯ ವಿದ್ಯಾರ್ಥಿನಿ ನೇತ್ರಾವತಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲೆ ಅನುಪಮ, ಶಿಕ್ಷಕಿ ಶೃತಿ ಉಪಸ್ಥಿತರಿದ್ದರು.