ಹಾಸನ : ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ದಲಿತರಿಗೆ ಬಡ್ತಿ ಮೀಸಲಾತಿ ವಿಚಾರದಲ್ಲಿ ರೇವಣ್ಣ ಅವರು ಅಡ್ಡಿಯಾಗಿದ್ದಾರೆ ಎನ್ನುವುದು ಸುಳ್ಳು. ಈ ವಿಷಯದಲ್ಲಿ ರೇವಣ್ಣ ಯಾವತ್ತೂ ವಿರೋಧ ಮಾಡಿಲ್ಲ. ರೇವಣ್ಣ ಅವರ ಬಗ್ಗೆ ಯಾರಾದರು ಹೀಗೆ ಹೇಳಿದರೆ ಅದಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಮೀಸಲಾತಿಯನ್ನು ಯಾರೂ ನಿಲ್ಲಿಸಲು ಆಗುವುದಿಲ್ಲ. ಮೀಸಲಾತಿ ನಿಲ್ಲಿಸಲು ಯಾರು ಹೋಗ್ತಾರೆ,ಯಾರು ಬಾಬಾ ಸಾಹೇಬರ ಪ್ರತಿಮೆಯನ್ನು ಸುಡುತ್ತೇವೆ ಅಂತಾರೆ. ಹೀಗೆ ಹೇಳುವವರಿಗೆ ಈ ದೇಶದಲ್ಲಿ ಸ್ಥಾನ ಇರುವುದಿಲ್ಲ. ನೀವು ಬಾಬಾ ಸಾಹೇಬರ ಪ್ರತಿಮೆ ಒಡೆದು ಹಾಕಿದರೆ, ಸಂವಿಧಾನ ಸುಟ್ಟರೆ ನಾವು ಏನು ಕಡ್ಲೆ ಪುರಿ ತಿನ್ನುತಿರ್ತೀವಾ? ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತುಮಕೂರಿನಲ್ಲಿ ನಾವು ದೇವೇಗೌಡರನ್ನು ಅತ್ಯಂತ ಬಹುಮತದಿಂದ ಆರಿಸುತ್ತೇವೆ. ನಾವು ಅವರನ್ನು ಸಂಸತ್ತಿಗೆ ಕಳುಹಿಸುತ್ತೇವೆ. ಭಾರತದ ಪ್ರಜಾಪ್ರಭುತ್ವ ಸುಭದ್ರವಾಗಿ ನಿಂತಿದ್ದರೆ ಅದು ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ. ನಮ್ಮ ಸಂವಿಧಾನ ಎಲ್ಲಾ ಸಮಸ್ಯೆ ಗಳಿಗೆ ಪರಿಹಾರ ಹೊಂದಿದೆ. ಆದರೆ ಈಗ ಆ ಸಂವಿಧಾನವೇ ಸಮಸ್ಯೆ ಎದುರಿಸುವ ಸಂದರ್ಭ ಬಂದಿದೆ.
ದುರ್ದೈವ ಎಂದರೆ ಈ ಸಂವಿಧಾನವನ್ನೇ ಬದಲಾಯಿಸಬೇಕು, ಸುಟ್ಟು ಹಾಕಬೇಕು ಎನ್ನುವ ರೀತಿಯ ಮಾತುಗಳು ಕೇಳಿ ಬರುತ್ತಿವೆ. ಸ್ವಾತಂತ್ರ್ಯ ನಂತರವೂ ದಲಿತರ ಮೇಲಿನ ಶೋಷಣೆ ನಿಂತಿದೆಯಾ ಎನ್ನುವ ಪ್ರಶ್ನೆಯನ್ನು ದೇಶದ ಮುಂದಿಡಬೇಕಿದೆ. ದಲಿತ ಸಹೋದರಿಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡೋದನ್ನು ನಾವು ನೋಡಿದ್ದೇವೆ. ನಾವು ನಾಗರೀಕ ಸಮಾಜ ಎಂದು ಹೇಳಿಕೊಳ್ಳುತ್ತಿರುವಾಗ ಇಂತಹ ಘಟನೆಯಿಂದಾಗಿ ನಾವೆಲ್ಲಾ ತಲೆ ತಗ್ಗಿಸುವಂತಾಗಿದೆ. ದೇಶದಲ್ಲಿ ಸ್ವಾತಂತ್ರ್ಯ ನಂತರವೂ ದಲಿತರ ಸ್ಥಿತಿ ಬದಲಾಗಿಲ್ಲ. ಆಳುವ ವರ್ಗ ಹಾಗೂ ದುಡಿಯುವ ವರ್ಗದ ನಡುವೆ ಹೋರಾಟ ಶುರುವಾಗಿದೆ ಆದರೆ ಗೆಲುವು ಮಾತ್ರ ದುಡಿಯುವ ವರ್ಗಕ್ಕೆ. ಈ ದೇಶದ ಅಬಿವೃದ್ದಿಗೆ ಯಾರು ಸಹಕರಿಸುತ್ತಾರೋ,ಯಾರು ಸಂವಿಧಾನವನ್ನು ಗೌರವಿಸುತ್ತಾರೋ ಅವರಿಗೆ ನಮ್ಮ ಮತ ನೀಡಬೇಕಿದೆ. ಈ ದೇಶಕ್ಕೆ ಸುಳ್ಳು ಹೇಳಿ, ಅನುಷ್ಠಾನ ಆಗದೇ ಇರುವಾಗ ಮತ್ತೆ ಮತ ಕೇಳಲು ಬಂದಿದ್ದಾರೆ. ಹಾಗಾಗಿ ನಾವು ಇವರ ವಿರುದ್ದ ಮತ ಚಲಾಯಿಸಬೇಕಿದೆ. ರೇವಣ್ಣ ಅವರ ರೀತಿ ಕೆಲಸ ಮಾಡುವುದಕ್ಕೆ ಯಾವ ರಾಜಕಾರಣಿಯಿಂದ ಲೂ ಸಾಧ್ಯವಿಲ್ಲ. ನಾನೂ ಸಂಪುಟದಲ್ಲಿ ಇದ್ದೇನೆ,ಅದ್ಯಾವಾಗ ವಿಷಯ ಸಂಪುಟದಲ್ಲಿ ಬರುತ್ತೋ ಗೊತ್ತೇ ಆಗುವುದಿಲ್ಲ. ರಾಕೇಟ್ ರೀತಿಯಲ್ಲಿ ವಿಷಯ ತಂದು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಡಾ.ಜಿ. ಪರಮೇಶ್ವರ್ ಅವರು ಹಾಸನದ ದಲಿತರ ಸಮಾವೇಶದಲ್ಲಿ ರೇವಣ್ಣರನ್ನು ಹೊಗಳಿದರು.










