ರೌಡಿ ಗೌರೀಶ್ ನಿಂದ ಪೊಲೀಸ್ ಪೇದೆಗೆ ಚಾಕು ಇರಿತ; ಶೂಟೌಟ್ ಮಾಡಿ ಬಂಧಿಸಿದ ಪೊಲೀಸರು!…

193
firstsuddi

ಮಂಗಳೂರು: ನಟೋರಿಯಸ್ ರೌಡಿಯೋರ್ವನನ್ನು ಬಂಧಿಸಲು ಹೋದ ಪೋಲಿಸ್ ಅಧಿಕಾರಿಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ರೌಡಿ ಗೌರೀಶ್ ಎಂಬವನ ಮೇಲೆ ಪೊಲೀಸರು ಶೂಟೌಟ್ ನಡೆಸಿ ಬಂಧಿಸಿದ ಘಟನೆ ಗುರುವಾರ ರಾತ್ರಿ ನಗರದಲ್ಲಿ ನಡೆದಿದೆ.ನಟೋರಿಯಸ್ ರೌಡಿ ಗೌರಿಶ್ ಎನ್ನುವವನನ್ನು ಬಂಧಿಸುವ ಸಲುವಾಗಿ ಪೋಲಿಸ್ ತಂಡ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ನಗರ ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿ ರೌಡಿಶೀಟರ್ ಗೌರೀಶ್ ವಿರುದ್ಧ ಮಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರೌಡಿಶೀಟರ್ ನ್ನು ಬಂಧಿಸಲು ಬಲೆಬೀಸಿದ್ದರು.

ರೌಡಿಶೀಟರ್ ನನ್ನು ಬಂಧಿಸಲು ತೆರಳಿದ್ದ ಪೊಲೀಸ್ ತಂಡದಲ್ಲಿನ ಪೇದೆ ಶೀನಪ್ಪ ಎಂಬವರಿಗೆ ಆರೋಪಿ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಜಾಗೃತರಾದ ಎಸ್ ಐ ಕಬ್ಬಾಳ್ ರಾಜ್ ಅವರು ತಮ್ಮ ಪ್ರಾಣರಕ್ಷಣೆಗಾಗಿ ರೌಡಿಶೀಟರ್ ನ ಕಾಲಿಗೆ ಫೈರಿಂಗ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.ರೌಡಿಶೀಟರ್ ವಿರುದ್ಧ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೂರು ಕೊಲೆ ಆರೋಪ ಪ್ರಕರಣಗಳಿವೆ.