ಫಸ್ಟ್ ಸುದ್ದಿ -ಕಲ್ಲು ಬೆಳೆಯುತ್ತೆ ನಿಜ. ಆದ್ರೆ, ಬರೆದ ಚಿತ್ರದ ಆಕಾರದಲ್ಲೇ ಬೆಳೆಯುತ್ತೆ ಅನ್ನೋದು ನಂಬಿಕೆಗೆ ಅನರ್ಹ. ಒಂದು ವೇಳೆ ಹಾಗೇ ಬೆಳೆದ್ರೆ ಅಲ್ಲೊಂದು ಅಗೋಚರ ಶಕ್ತಿ ಇದ್ರೆ ಮಾತ್ರ ಸಾಧ್ಯ… ಯಾಕಂದ್ರೆ, ಸಾವಿರಾರು ವರ್ಷಗಳ ಹಿಂದೆ ಸ್ವಾಮೀಜಿಯೊಬ್ರು ಕಲ್ಲಿನ ಮೇಲೆ ವಿಭೂತಿಯಲ್ಲಿ ಬರೆದ ಬಸವ ಇಂದು ಆಶ್ಚರ್ಯಕರ ರೀತಿಯಲ್ಲಿ ಬೆಳೆದಿದೆ. ವರ್ಷಕ್ಕೆ ಒಂದು ರಾಗಿ ಕಾಳಿನಷ್ಟು ಬೆಳೆಯೋ ಆ ಬಸವನ ಬೆಳವಣಿಗೆಯನ್ನ ಕಣ್ಣಾರೆ ಕಂಡೋರು ಇದ್ದಾರೆ. ಆ ಬಸವ ಯಾವ್ದು, ಎಲ್ಲಿದೆ, ಅದನ್ನು ಬರೆದವರು ಯಾರು ಅನ್ನೋ ಕುತೂಹಲಕ್ಕೆ ಈ ಸ್ಟೋರಿ ಓದಿ…
ಪ್ರಕೃತಿಯ ವೈಚಿತ್ರ್ಯ, ದೇವರ ಮಹಿಮೆ ಏನಿರುತ್ತೋ ಯಾರಿಗೊತ್ತು. ಸಾವಿರಾರು ವರ್ಷಗಳ ಹಿಂದೆ ಭೂಗರ್ಭ ಸಂಜಾತ ದೈವಿಭಕ್ತನೊಬ್ಬ ವಿಭೂತಿಯಲ್ಲಿ ಬರೆದ ಬಸವ ಅದೇ ಆಕಾರದಲ್ಲಿ ಎದ್ದು ಹೊರಬರುವಂತೆ ಬೆಳೆದಿರೋದು ನಿಜಕ್ಕೂ ಆಶ್ಚರ್ಯ. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಮೊದಲ ಪೀಠವಾದ ಚಿಕ್ಕಮಗಳೂರಿನ ರಂಭಾಪುರಿ ಪೀಠದ ಕ್ಷೇತ್ರನಾಥ ವೀರಭದ್ರನ ಸನ್ನಿಧಿಯಲ್ಲಿರೋ ಈ ಬಸವ ಎರಡು ಸಾವಿರ ವರ್ಷಗಳಿಂದ ಬೆಳೆಯುತ್ತಲೇ ಇದೆ.
ಚೋಳರ ಕಾಲದ ಈ ದೇವಾಲಯದಲ್ಲಿ ಪೀಠದ 2ನೇ ಗುರುಗಳಾದ ಭೂಗರ್ಭ ಸಂಜಾತ ರುದ್ರಮುನಿ ಶಿವಚಾರ್ಯ ಸ್ವಾಮೀಜಿಯವ್ರು ಬರೆದ ಬಸವನಿದು. ವಿಭೂತಿಯಲ್ಲಿ ಬರೆದ ಬಸವ ಹೀಗೆ ಬೆಳೆಯುತ್ತಿರೋದ್ರಿಂದ ಭಕ್ತಸಮೂಹ ಇದೆಲ್ಲಾ ದೇವರ ಮಹಿಮೆ ಅಂತಿದೆ. ಜೊತೆಗೆ ಈ ಬಸವನಿಗೆ ಅಗಾಧ ಶಕ್ತಿಯೂ ಇದ್ಯಂತೆ. ಭಕ್ತರು ಯಾವುದೇ ಹರಕೆ ಕಟ್ಟಿಕೊಂಡ್ರು ಈ ಬಸವ ಈಡೇರಿಸುತ್ತಾನಂತೆ.
ಆರಂಭದಲ್ಲಿ ಕಂಬಂಕ್ಕೆ ಅಂಟಿಕೊಂಡಿದ್ದ ಬಸವ ಇಂದು ಒಂದು ರೂಪಾಯಿ ನಾಣ್ಯ ಹಾಗೂ ಒಂದು ಹೂ ಕೂರುವ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರತಿದಿನ ಪೂಜೆಯಂದು ಹೂವಿನ ಹಾರವನ್ನು ಹಾಕ್ತಾರೆ. ಬೆಳೆಯುತ್ತಿರೋ ಬಸವನ ಒಂದು ಕಣ್ಣು ಭಕ್ತರು ನೋಡುವಷ್ಟು ಸಂಪೂರ್ಣ ಹೊರಬಂದಿದೆ. ಯಾವಾಗ ಈ ಬಸವನ ಎರಡೂ ಕಣ್ಣುಗಳು ಸಂಪೂರ್ಣ ಹೊರಬರುತ್ತೋ ಆಗ ನಾನು ಮತ್ತೆ ಹುಟ್ಟಿ ಇದೇ ಪೀಠಕ್ಕೆ ಸ್ವಾಮೀಜಿಯಾಗಿ ಬರ್ತೇನೆ ಅಂದಿದ್ದಾರಂತೆ ಭೂಗರ್ಭ ಸಂಜಾತರಾಗಿ ಹುಟ್ಟಿ, ಸಜೀವ ಸಮಾಧಿಯಾಗಿರೋ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. ಅದನ್ನ ರುದ್ರಮುನಿ ಶಿವಚಾರ್ಯ ಕಾಲಜ್ಞಾನ ಪುಸ್ತಕದಲ್ಲಿ ಬರೆದಿಟ್ಟಿದ್ದಾರಂತೆ. ಮಕ್ಕಳಾಗದವರು ಹರಕೆ ಕಟ್ಟಿದ್ರೆ ಅಂತವರಿಗೆ ಇಲ್ಲಿ ಮಕ್ಕಳಾಗುತ್ತಂತೆ. ಈಗಾಗ್ಲೆ ಬಸವನ ಒಂದು ಕಣ್ಣು, ಒಂದು ಕೋಡು ಹೊರಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತೊಂದು ಕಣ್ಣು ಕೋಡು ಬರೋ ನಂಬಿಕೆ ಭಕ್ತರದ್ದು.
ಒಟ್ಟಾರೆ, ಬಸವ ಬೆಳೆಯುತ್ತಿರೋದ್ರ ಹಿಂದೆ ದೈವಿ ಶಕ್ತಿ ಅಡಗಿದ್ಯೋ, ವೈಜ್ಞಾನಿಕ ಕಾರಣವಿದ್ಯೋ ಅಥವ ಭೂಗರ್ಭ ಸಂಜಾತ ದೈವಿ ಭಕ್ತನ ನಿಸ್ವಾರ್ಥ ಭಕ್ತಿಯೋ ಗೊತ್ತಿಲ್ಲ. ಆದ್ರೆ, ಕಲ್ಲು ಬಸವನ ಬೆಳವಣಿಗೆ ಮಾತ್ರ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಈ ಬಸವನ ಬೆಳವಣಿಗೆ ಹೇಗೆ ಇರ್ಲಿ. ಭಕ್ತಿಯಿಂದ ಇಲ್ಲಿ ಕೈಮುಗಿದು ಹರಕೆ ಕಟ್ಟಿದ್ರೆ ಕಟ್ಟಿದ ಹರಕೆಗಳೆಲ್ಲಾ ಈಡೇರುತ್ತೆ ಅನ್ನೋ ಭಕ್ತರ ನಂಬಿಕೆ ಹಾಗೇ ಇದ್ದು, ಜನ ಮತ್ತಷ್ಟು ಅನುಕೂಲರಸ್ತರಾಗ್ಲಿ ಅನ್ನೋದು ನಮ್ಮ ಆಶಯ.










