ಹಾಸನ : ಸಂಸದರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ಪಾಳೆಯದಲ್ಲಿ ಒಂದೆಡೆ ಸಂತೋಷ ಹಾಗೂ ಇನ್ನೊಂದೆಡೆ ಬೇಸರ ಇದೆ. ಜಿಲ್ಲೆಯ ಜನರು ನನ್ನನ್ನು ಗೆಲ್ಲಿಸಿರುವುದಕ್ಕೆ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ನಮಗೆ ಶಕ್ತಿಯನ್ನು ತುಂಬಿದ್ದಾರೆ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ಇದು ಪ್ರಜ್ವಲ್ ರೇವಣ್ಣ ಅವರ ಗೆಲುವಲ್ಲ. ಉಭಯ ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿ ಗೆಲ್ಲಿಸಿದ್ದಾರೆ. ಇದು ದೇವೇಗೌಡರು ಹಾಗೂ ಕಾರ್ಯಕರ್ತರ ಗೆಲುವು. ದೇವೇಗೌಡ ಅವರು ಸೋತಿರುವುದಕ್ಕೆ ದುಃಖ ಆಗುತ್ತಿದೆ. ಹೋರಾಟವೇ ಜೀವನ ಎಂದುಕೊಂಡಿದ್ದ ದೇವೇಗೌಡ ಅವರಿಗೆ ಆಕಸ್ಮಿಕವಾಗಿ ಸೋಲಾಗಿದೆ. ತುಮಕೂರಿಗೆ ಹೇಮಾವತಿ ನೀರು ಕೊಟ್ಟಿದ್ದು ದೇವೇಗೌಡ ಅವರು ಆದರೂ ಕೆಲವು ವಿರೋಧಿಗಳು ಅಪಪ್ರಚಾರ ಮಾಡಿದರು. ತುಮಕೂರಿನ ಎರಡೂ ಪಕ್ಷಗಳ ನಾಯಕರು ಹಾಗೂ ಮತದಾರರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ. ನಾನು ರಾತ್ರಿ ಇಡೀ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಹಾಸನ ಜಿಲ್ಲೆಯ ಜನರು ತಪ್ಪು ತಿಳಿಯಬಾರದು. ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದಿದ್ದೇನೆ. ಮತ್ತೆ ದೇವೇಗೌಡ ಅವರಿಗೆ ನಾವೆಲ್ಲರೂ ಸೇರಿ ಶಕ್ತಿ ತುಂಬುವ ಕೆಲಸ ಮಾಡೋಣ ಎಂದರು.









