ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ : ಅರಣ್ಯಾಧಿಕಾರಿ ಶಿಲ್ಪ…

232
firstsuddi

ಚಿಕ್ಕಮಗಳೂರು : ಪರಿಸರ ಸಂರಕ್ಷಣೆ ಮತ್ತು ಮರಗಿಡಗಳನ್ನು ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಮನುಷ್ಯರು ಮಾಡಬೇಕು. ಅದು ಎಲ್ಲರ ಕರ್ತವ್ಯ ಕೂಡ ಎಂದು ವಲಯ ಅರಣ್ಯಾಧಿಕಾರಿ ಶಿಲ್ಪ ಅವರು ಹೇಳಿದ್ದಾರೆ. ಅವರಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಶ್ರೀ ಮಂಜುನಾಥೇಶ್ವರ ವಿದ್ಯಾಕೇಂದ್ರ, ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕೈಗಾರಿಕೆ ಜನ ಸಂಖ್ಯೆ ಹೆಚ್ಚಾಗುತ್ತಿದಂತೆ ಅರಣ್ಯ, ಮರ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮನುಷ್ಯನ ಸ್ವಾರ್ಥ ಮತ್ತು ಆಸೆಗೆ ಸಮೃದ್ಧ ಸಸ್ಯ ಸಂಪತ್ತು ಹಾನಿಯಾಗುತ್ತಿದೆ. ನಗರಗಳ ಸುತ್ತ ಮುತ್ತ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗಗಳ ಹಳ್ಳಿ ಪ್ರದೇಶಗಳಲ್ಲಿ ಮರಗಿಡಗಳನ್ನು ನಾಶ ಮಾಡಿ ಮನುಷ್ಯರು ಕಟ್ಟಡ, ಕೈಗಾರಿಕೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಪ್ರಕೃತಿ ನಾಶದ ಪರಿಣಾಮ ಹವಾಮಾನದಲ್ಲಿ ವೈಪರಿತ್ಯಗಳನ್ನು ನಾವುಗಳು ಅನುಭವಿಸುತ್ತಿದ್ದೇವೆ. ಗಾಳಿ ಮಳೆ ಕುಡಿಯುವ ನೀರು ಇಲ್ಲದೆ ಅನೇಕ ರೋಗ ರುಜಿನಗಳಿಗೆ ಮನುಷ್ಯರು ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲ ಪರಿಸರ ನಾಶವೇ ಕಾರಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಜಿ.ಎಸ್ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ಜಿ.ಆರ್. ಚಂದ್ರಶೇಖರ್ ಅವರು ಪರಿಸರದ ದಿನ ಮಾತ್ರ ಗಿಡ ನೆಟ್ಟು ನೀರು ಹಾಕಿ ಕಾರ್ಯಕ್ರಮ ಆಚರಣೆ ಮಾಡಿ ಅಲ್ಲಿಗೆ ಬಿಟ್ಟರೆ ಸಾಲದು. ಕನಿಷ್ಟ ತಿಂಗಳಲ್ಲಿ ಎರಡರಿಂದ ಮೂರು ಗಿಡಗಳನ್ನಾದರು ನೆಟ್ಟು ಪರಿಸರದ ಸಂರಕ್ಷಣೆಗೆ ಸಾರ್ವಜನಿಕರು ಮುಂದಾಗಬೇಕು. ಸಮಾಜದ ಮುಖಂಡರು, ಶಾಲೆ, ಸಂಘ, ಯುವಕ, ಯುವತಿಯರು ಇಂತಹ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಕೊಂಡರೆ ನಮ್ಮ ಮುಂದಿನ ಪೀಳಿಗೆಗೆ ಒಂದು ಉತ್ತಮ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬಿ.ಜಿ.ಎಸ್ ಪ್ರಾಂಶುಪಾಲರಾದ ಶ್ರೀ ಸುರೇಂದ್ರ ಇವರು ಪರಿಸರದ ಬಗ್ಗೆ ವಹಿಸಬೇಕಾದ ಕಾಳಜಿ ಕುರಿತು ಮಾತನಾಡಿದರು. ಸಮನ್ವಯ ಅಧಿಕಾರಿಗಳಾದ ಡಾ: ಎಸ್.ಆರ್ ವೈದ್ಯ, ಶಾಲಾ ಸಿಬ್ಬಂದಿ ವರ್ಗ, ಅರಣ್ಯ ಸಿಬ್ಬಂದಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು.