ಚಿಕ್ಕಮಗಳೂರು : ಇಂದಿನ ಯುವಪೀಳಿಗೆ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡಬೇಕು, ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ ಸಲಹೆ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಿನ ಹಿರೇಗೌಜದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ದಿ|| ಬೆಳಗೋಡು ಲೋಕಪ್ಪಗೌಡ ಮತ್ತು ದಿ|| ಡಿ.ಎಸ್.ಕೃಷ್ಣಪ್ಪಗೌಡ ದತ್ತಿ ಉಪನ್ಯಾಸ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲೀಷ್‍ನಲ್ಲಿ ಮಾತನಾಡಿದರೆ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡಿದರೆ ನಾವು ದೊಡ್ಡವರಾಗುತ್ತೇವೆ ಎಂಬ ಭ್ರಮೆ ಇಂದಿನ ಯುವ ಪೀಳಿಗೆಯಲ್ಲಿದೆ, ಪ್ರಪಂಚದ ಬಹಳಷ್ಟು ದೇಶಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯವನ್ನು ಗೌರವಿಸಿ ಆಚರಿಸಲಾಗುತ್ತಿದೆ. ಆದರೆ ನಾವು ನಮ್ಮದನ್ನು ಬಿಟ್ಟು ಪಾಶ್ಚಾತ್ಯ ಶೈಲಿಯನ್ನು ಅನುಕರಣೆ ಮಾಡುತ್ತಿದ್ದೇವೆ. ಇದರಿಂದಾಗಿ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಅತಿಯಾದ ಸ್ವಾರ್ಥದಿಂದಾಗಿ ನಾವು ಪರಿಸರವನ್ನು ನಿರಂತರವಾಗಿ ನಾಶ ಮಾಡುತ್ತಿದ್ದೇವೆ. ಶೇ.33 ರಷ್ಟು ಇರಬೇಕಾಗಿದ್ದ ಅರಣ್ಯವನ್ನು ಶೇ.13ಕ್ಕೆ ಇಳಿಸಿದ್ದೇವೆ. ಇದರಿಂದಾಗಿ ಈಗಾಗಲೇ ಭೂಮಿಯ ಮೇಲೆ ಐದು ಪ್ರಳಯಗಳಾಗಿವೆ. ಆರನೇ ಪ್ರಳಯ ಯಾವಾಗ ಬೇಕಾದರೂ ಆಗಬಹುದು. ಅದನ್ನು ತಪ್ಪಿಸಬೇಕಾದರೆ ನಾವು ಸ್ವಾರ್ಥ ಬಿಟ್ಟು ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಮಾತನಾಡಿ ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ದೇಶದಲ್ಲಿ ಶೇ.33 ರಷ್ಟು ಅರಣ್ಯವನ್ನು ಕಾಯ್ದುಕೊಳ್ಳಬೇಕಾಗಿದ್ದು, ಗಿಡಮರಗಳನ್ನು ಬೆಳೆಸುವ ಮೂಲಕ ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ ನಮ್ಮ ಹಿರಿಯರು ದೇವರೆಂದು ಪೂಜಿಸುತ್ತಿದ್ದ ಪ್ರಕೃತಿಯ ಕೂಸಾಗಿ ನಾವು ಬದುಕಬೇಕು. ಅದನ್ನು ನಿಯಂತ್ರಿಸುವ ಸಾಹಸ ಮಾಡಬಾರದು, ಸುಂದರವಾದ ಭೂಮಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಅದನ್ನು ಕೊಡುಗೆಯಾಗಿ ನೀಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಎನ್.ಆನಂದಪ್ಪ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿವರ್ಷ ಪರಿಸರ ದಿನಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು,
ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಸಾಹಿತ್ಯ ರಚನೆಯಲ್ಲಿ ಪರಿಸರದ ಪ್ರೇರಣೆ ವಿಷಯ ಕುರಿತು ಶಿಕ್ಷಕ ಎಸ್.ಡಿ.ಶರಣಗೌಡ, ಕುವೆಂಪು ಕಾವ್ಯದಲ್ಲಿ ಪ್ರಕೃತಿಯ ಸೊಬಗು ಕುರಿತು ವೀರೇಶಕೌಲಗಿ ಉಪನ್ಯಾಸ ನೀಡಿದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಹೆಚ್.ಪಿ.ದೇವೇಂದ್ರ ಅಧ್ಯಕ್ಷತೆ ವಹಿಸಿದ್ದರು, ಕಸಾಪ ಸದಸ್ಯ ಬಾಲು ಕನ್ನೇಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಜಯಣ್ಣ, ವಿಷಯ ಪರಿವೀಕ್ಷಕಿ ಅರುಣಕುಮಾರಿ ಉಪಸ್ಥಿತರಿದ್ದರು.
ಶಿಕ್ಷಕರಾದ ಬಿ.ಎಂ.ಜ್ಞಾನಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು, ಲತಾ ಸ್ವಾಗತಿಸಿದರು, ಸುವi ವಂದಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ನಮ್ಮ ಹಿರಿಯರು ದೇವರೆಂದು ಪೂಜಿಸುತ್ತಿದ್ದ ಪ್ರಕೃತಿಯ ಕೂಸಾಗಿ ನಾವು ಬದುಕಬೇಕು : ಕುಂದೂರು...










