ಕೊಟ್ಟಿಗೆಹಾರ: ಮಂಗಳೂರಿನ ರಾಜಣ್ಣ ಹಾಗೂ ಕೊಕ್ಕಡದ ವಿಲ್ಪೆಡ್ ಅವರಿಂದ ಇಂಧನ ಉಳಿತಾಯ ಜಾಗೃತಿಗೆ ಸೈಕಲ್ ಜಾಥಾ…

462
firstsuddi

ಕೊಟ್ಟಿಗೆಹಾರ: ಮಂಗಳೂರಿನ ರಾಜಣ್ಣ ಹಾಗೂ ಕೊಕ್ಕಡದ ವಿಲ್ಪೆಡ್ ಅವರು ಸೈಕಲ್ ಬಳಕೆಗೆ ಪ್ರೋತ್ಸಾಹ, ಇಂಧನ ಉಳಿತಾಯ ಜಾಗೃತಿ ಮೂಡಿಸುವ ಸಲುವಾಗಿ ಚಾರ್ಮಾಡಿ ಘಾಟ್‍ನಿಂದ ಪ್ರಾರಂಭವಾದ ಸೈಕಲ್ ಜಾಥಾ ಭಾನುವಾರ ಕೊಟ್ಟಿಗೆಹಾರ ತಲುಪಿತು. ಚಾರ್ಮಾಡಿ ಘಾಟ್‍ನಿಂದ ಪ್ರಾರಂಭವಾದ ಜಾಥಾ ಕೊಟ್ಟಿಗೆಹಾರ, ಮೂಡಿಗೆರೆ ಹ್ಯಾಂಡ್ ಪೋಸ್ಟ್ ಮೂಲಕ ಹಾನುಬಾಳ್, ಸಕಲೇಶಪುರ, ಗುಂಡ್ಯ, ಶಿರಾಡಿ ಘಾಟ್ ಮಾರ್ಗವಾಗಿ ಮಂಗಳೂರು ತಲುಪಲಿದೆ ಎಂದು ತಿಳಿಸಿದರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಮಂಗಳೂರಿನ ರಾಜಣ್ಣ, ಭಾನುವಾರ ಬೆಳಿಗ್ಗೆ 5 ಗಂಟೆಗೆ ಸೈಕಲ್ ಜಾಥಾ ಪ್ರಾರಂಭಿಸಿದ್ದು, ರಾತ್ರಿ 10 ಗಂಟೆಗೆ ಮಂಗಳೂರು ತಲುಪಲಿದ್ದೇವೆ. ಗಂಟೆಗೆ 15 ರಿಂದ 20 ಕಿಮಿ ಚಲಿಸುತ್ತೇವೆ. ಇಂಧನ ಉಳಿತಾಯ ಅರಿವು ಮತ್ತು ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸಲು ಈ ಜಾಥಾ ಆರಂಭಿಸಿದ್ದೇವೆ. ದೂರ ಪ್ರಯಾಣ ಕಾರು ಬಸ್ಸಿನಂಥ ವಾಹನ ಅಗತ್ಯವಿದ್ದರೂ ಕೂಡ ಹತ್ತಿರದ ಪ್ರಯಾಣಕ್ಕೆ ಸೈಕಲ್ ಬಳಕೆ ಉತ್ತಮ ಎಂದರು.
ಕೊಕ್ಕಡದ ಶಿಕ್ಷಕ ವಿಲ್ಪೆಡ್ ಮಾತನಾಡಿ ಭಾರತ ಈಗ ಪೆಟ್ರೋಲ್ ಡಿಸೇಲ್‍ನಂತಹ ಇಂಧನಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸಿದೆ. ದಿನದಿನಕ್ಕೂ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನಕ್ಕೆ ಅಭಾವ ಬರಬಹುದು. ಇಂಧನ ರಹಿತ ಮಾನವ ಶಕ್ತಿಯನ್ನು ಬಳಸಿ ಚಲಿಸಬಹುದಾದಂತಹ ಸೈಕಲ್ ಬಳಕೆಗೆ ಎಲ್ಲರೂ ಮುಂದಾಗಬೇಕು. ಸೈಕಲ್ ಪರಿಸರ ಸ್ನೇಹಿ ವಾಹನವಾಗಿದ್ದು, ಹೊಗೆರಹಿತ ಮತ್ತು ದೈಹಿಕವಾಗಿ ಕೂಡ ಆರೋಗ್ಯ ಹೆಚ್ಚಿಸುವಲ್ಲಿ ಸೈಕಲ್ ಬಳಕೆಗೆ ಎಲ್ಲರನ್ನೂ ಪ್ರೇರೇಪಿಸುವ ಕೆಲಸವಾಗಬೇಕಿದೆ ಎಂದರು.