ಚಿಕ್ಕಮಗಳೂರು : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಯೋಗಾಭ್ಯಾಸವನ್ನೂ ಮಾಡಬೇಕು : ಜಯರಾಂ…

230
firstsuddi

ಚಿಕ್ಕಮಗಳೂರು : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಯೋಗಾಭ್ಯಾಸವನ್ನೂ ಮಾಡಬೇಕು ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಯರಾಂ ಸಲಹೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಆಜಾದ್ ಪಾರ್ಕ್ ಶಾಲೆಯಲ್ಲಿ ಬುಧವಾರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕ ಹಾಗೂ ಬಾಲಕಿಯರಿಗಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಅತ್ಯಂತ ಸಹಕಾರಿ, ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೇಹ ಸಧೃಡವಾಗುವುದರ ಜೊತೆಗೆ ನಿರೋಗಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಯೋಗ ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ, ಅನೇಕ ರೋಗಗಳು ಗುಣವಾಗಲು ವೈದ್ಯರೂ ಸಹ ಯೋಗಾಭ್ಯಾಸ ಮಾಡುವಂತೆ ರೋಗಿಗಳಿಗೆ ಸಲಹೆ ನೀಡುತ್ತಾರೆ ಎಂದು ತಿಳಿಸಿದರು.
ಯೋಗ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಮಾತನಾಡಿ ಈ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ನೇರವಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ತಾಲ್ಲೂಕಿನ 33 ಶಾಲೆಗಳ 282 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಯೋಗ ಪ್ರದರ್ಶನ ನೀಡಿದರು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಭಕ್ತರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜಶೇಖರ್ ಉಪಸ್ಥಿತರಿದ್ದರು.