ಚೆನ್ನೈ : ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದತಿ ಬಳಿಕ ದೇಶದ ವಿವಿದೆಡೆ ಉಗ್ರರ ದಾಳಿ ಭೀತಿ ಹೆಚ್ಚಾಗಿದ್ದು, ಇದೀಗ ಶ್ರೀಲಂಕಾ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ 6 ಮಂದಿ ಉಗ್ರರು ತಮಿಳುನಾಡಿಗೆ ನುಸುಳಿರುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ತಮಿಳುನಾಡಿನಾಧ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯಕ್ಕೆ ನುಸುಳಿರುವ ಉಗ್ರರಲ್ಲಿ ಒಬ್ಬರು ಪಾಕಿಸ್ತಾನದವರಾಗಿದ್ದು, ಇನ್ನುಳಿದ ಐವರು ಉಗ್ರರು ಶ್ರೀಲಂಕಾ ತಮಿಳಿಯನ್ನರು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಉಗ್ರರು ನುಸುಳಿರುವ ಮಾಹಿತಿ ತಿಳಿಯುತ್ತಿದ್ದಂತೆ ಭದ್ರತೆಯ ದೃಷ್ಟಿಯಿಂದ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಯನ್ನು ಹೆಚ್ಚಿಸಲಾಗಿದೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.










