ಹಣಕ್ಕಿಂತ ಗುಣ ದೊಡ್ಡದು ಅಂತಾ ಕಲಿಸಿಕೊಟ್ಟ ಅಪ್ಪನ ಮುಂದೆ ಮತ್ತೆ ಮಗುವಾಗಿದ್ದರು ಸಿದ್ದಾರ್ಥ್ ಹೆಗ್ಗಡೆ…

1546
firstsuddi
  • ರಾಘವೇಂದ್ರ ಕೆಸವಳಲು 

ಫಸ್ಟ್ ಸುದ್ದಿ :ಲಕ್ಷಾಂತರ ಕಾಫಿ ಬೆಳೆಗಾರರು ನೆಮ್ಮದಿಯ ಜೀವನ ನಡೆಸಲು ಕಾರಣರಾದ ಮಲೆನಾಡ ಮಾಣಿಕ್ಯ ಸಿದ್ದಾರ್ಥ್ ಬದುಕಿನ ಮಧ್ಯದಲ್ಲೇ ಬದುಕು ಮುಗಿಸಿದರೆ ಅವರ ತಂದೆ ಗಂಗಯ್ಯ ಹೆಗ್ಗಡೆ ಅವರು ವಯೋಸಹಜ ಖಾಯಿಲೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ದುರಂತ ಎಂದರೆ ಮಗನ ಸಾವು ತಂದೆಗೆ ತಿಳಿಯಲಿಲ್ಲ, ಹಾಗೆಯೇ ತಂದೆಯ ಸಾವು ಮಗನಿಗೆ ತಿಳಿಯಲಿಲ್ಲ.
ಅಪ್ಪ…ನಿಮ್ಮ ಹತ್ತಿರ ಏನೋ ಹೇಳ್ಕೋಬೇಕು ಒಮ್ಮೆ ಎದ್ದೇಳಿ ಅಪ್ಪ ಕಣ್ಬಿಟ್ಟು ಸಿದ್ದಾರ್ಥ್ ಅಂತ ಒಮ್ಮೆ ಬಾಯ್ತುಂಬ ಕರೆಯಿರಿ ಅಪ್ಪ. ನಾನು ಅನುಭವಿಸುತ್ತಿರೋ ಎಲ್ಲಾ ಸಂಕಟ ಒಮ್ಮೆಲೆ ಮರೆಯಾಗುತ್ತೆ ಎಂದು ಸಿದ್ದಾರ್ಥ್ ಅವರು ಆಸ್ಪತ್ರೆಗೆ ತೆರಳಿದಾಗ ಫೋಟೋದಲ್ಲಿ ಅವರ ಮನಸ್ಸಿನ ನೋವು ಎದ್ದು ಕಾಣುತ್ತಿತ್ತು. ಕ್ಷಮಿಸಿಬಿಡಿ ಅಪ್ಪ ನನ್ನನ್ನು ಕ್ಷಮಿಸಿಬಿಡಿ ನೀವೇ ಮಾತನಾಡದ ಮೇಲೆ ನಾನಿದ್ದು ಏನು ಸಾಧಿಸಲಿ. ಅಂತಾ ಗಟ್ಟಿ ನಿರ್ಧಾರ ಮಾಡಿದ ಉದ್ಯಮಿ ಸಿದ್ದಾರ್ಥ್ ಅವರು ಅಪ್ಪನ ಬಿಗಿದಪ್ಪಿಕೊಂಡು ಏನನ್ನೋ ಹೇಳಬೇಕು ಅಂತಾ ಬಂದಿದ್ದೋರು ಅದನ್ನು ಹೇಳಲಾಗದೆ ತಂದೆಯ ನೋವನ್ನು ನೋಡಲಾಗದೆ ನೊಂದುಕೊಂಡೆ ಒಂದು ತಿಂಗಳ ಹಿಂದೆಯಷ್ಟೇ ಮೈಸೂರಿನ ಖಾಸಗಿ ಆಸ್ಪತ್ರೆಯಿಂದ ಹೊರಟು ಹೋಗಿದ್ದು, ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಇದೊಂದು ಫೋಟೋ ಮಾತ್ರ. ಹಣಕ್ಕಿಂತ ಗುಣ ದೊಡ್ಡದು ಅಂತಾ ಕಲಿಸಿಕೊಟ್ಟ ಅಪ್ಪನ ಮುಂದೆ ಮತ್ತೆ ಮಗುವಾಗಿದ್ದರು ಸಿದ್ದಾರ್ಥ್. ನಂತರ ನಡೆದ ದುರಂತ ಸಾವಿನ ನಂತರ ಸಿಕ್ಕಿದ ಫೋಟೋ ಎಲ್ಲರ ಕಣ್ಣಲ್ಲೂ ನೀರು ಬರುವಂತೆ ಮಾಡಿತ್ತು. ಆ ಫೋಟೋ ನೋಡಿದ ವ್ಯಕ್ತಿಯ ಹೃದಯ ಸಮುದ್ರದಲ್ಲಿ ಭಾವನೆಯ ಸುನಾಮಿ ಏಳಿಸಿಬಿಟ್ಟಿತ್ತು. ಸಿದ್ದಾರ್ಥ್ ಅವರು ಮಾಡಿದ ಸಾಧನೆಯ ಹಿಂದೆ ಇದ್ದವರು ಗಂಗಯ್ಯ ಹೆಗ್ಗಡೆ ಅವರು ಹಾಗಾಗಿ ತನ್ನ ಕಷ್ಟವನ್ನು ಅಪ್ಪನ ಬಳಿ ಹೇಳಿಕೊಳ್ಳಬೇಕು ಅಂತಾ ಬಂದಿದ್ದ ಸಿದ್ದಾರ್ಥ್ ಅವರಿಗೆ ಅಪ್ಪ ಕೋಮದಿಂದ ಹೊರ ಬರೋದು ಕಷ್ಟ ಅಂತಾ ಗೊತ್ತಾದಾಗ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಅದರಂತೆ ಅಪ್ಪ ಮಲಗಿದ್ದ ಆಸ್ಪತ್ರೆಯ ಹಾಸಿಗೆಯ ಮುಂದೆ ಭಾವುಕರಾಗಿ ಕೂತಿದ್ದನ್ನು ಕಂಡರೆ ಅವರು ಅವರ ತಂದೆಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಅರ್ಥವಾಗುತ್ತದೆ. ಒಂದು ಕಡೆ ತನ್ನ ಪ್ರೀತಿಯ ಅಪ್ಪನ ಆರೋಗ್ಯ ಸ್ಥಿತಿ ಮತ್ತೊಂದೆಡೆ ವ್ಯವಹಾರದಲ್ಲಿ ತಾನು ಅನುಭವಿಸುತ್ತಿರೋ ಸೋಲು. ಈ ಸಂಕಟ ಸಿದ್ದಾರ್ಥ್ ಅವರನ್ನು ಮತ್ತಷ್ಟು ಕಾಡಿತ್ತು. ಹಾಗಾಗಿಯೇ ಸಿದ್ದಾರ್ಥ್ ಅವರು ಅಂತದೊಂದು ಕೆಟ್ಟ ನಿರ್ಧಾರಕ್ಕೆ ಬಂದರೇನೋ ಅಂತಾ ಹಲವರಿಗೆ ಅನಿಸಿರುವುದು ಸುಳ್ಳಲ್ಲ. ಸಿದ್ದಾರ್ಥ್ ಅವರ ಸಾವು ಕುಟುಂಬವನ್ನು ಕಾಡುತ್ತಿರುವಾಗಲೇ ಇದೀಗ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗ್ಗಡೆ ಅವರು ಕೂಡಾ ಇಹಲೋಕ ತ್ಯಜಿಸಿರುವುದು ಅವರ ಕುಟುಂಬ ಹಾಗೂ ಕಾಫಿ ಬೆಳೆಗಾರರು ಮಲೆನಾಡ ಮಾಣಿಕ್ಯಗಳನ್ನು ಕಳೆದುಕೊಂಡಂತಾಗಿದೆ.