ಮೂಡಿಗೆರೆ: ಎಂ.ಜಿ.ಎಂ ಆಸ್ಪತ್ರೆಯ ಡಯಲಿಸಿಸ್ ಕೇಂದ್ರಕ್ಕೆ ನೀರಿನ ಕೊರತೆ ಜೀವ ಭಯದಲ್ಲಿ ರೋಗಿಗಳು…

913
firstsuddi

ಮೂಡಿಗೆರೆ: ತಾಲ್ಲೂಕಿನ ಸರ್ಕಾರಿ ಎಂಜಿಎಂ ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೇ ರೋಗಿಗಳು ತಮ್ಮ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಚಿಕಿತ್ಸೆಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮಂತಹ ಬಡವರಿಗೆ ಸರ್ಕಾರದ ಮಹತ್ವಾಕಾಂಶಿ ಯೋಜನೆಯಾದ ಉಚಿತ ಡಯಲಿಸಿಸ್ ಘಟಕವನ್ನು ಸರ್ಕಾರ ಕಲ್ಪಿಸಿಕೊಟ್ಟಿದ್ದು, ಇಂತಹ ಅವ್ಯವಸ್ಥೆಯಿಂದ ದುಡ್ಡುಕೊಟ್ಟು ಖಾಸಗಿ ಆಸ್ಪತ್ರೆಗೆ ತೆರಳಿ ಡಯಾಲಿಸಿಸ್ ಮಾಡಿಸಿಕೊಂಡು ನಮ್ಮಂತಹ ಬಡವರ ಜೀವ ಉಳಿಸಿಕೊಳ್ಳಲು ಅಸಾಧ್ಯವಾಗಿದೆ ಎಂದು ಆಸ್ಪತ್ರೆಯಲ್ಲಿ ತನ್ನ ಪತ್ನಿಯ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ಜಾಬೀರ್ ಹುಸೈನ್ ಅವರು ಫಸ್ಟ್ ಸುದ್ದಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಸಂಬಂಧಪಟ್ಟಂತೆ ವಿಷಯದ ಕುರಿತು ಸ್ವತಃ ಆಸ್ಪತ್ರೆಗೆ ತೆರಳಿದ ಬಿಜೆಪಿ ಜಿಲ್ಲಾ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಧನಿಕ್ ಕೋಡಿದಿಣ್ಣೆ ಅವರು ಆಸ್ಪತ್ರೆಯ ಆಡಳಿತಾಧಿಕಾರಿಗಳ ಗಮನಕ್ಕೆ ತಂದು ವಿಷಯದ ಗಂಭೀರತೆಯನ್ನು ಅವರಿಗೆ ತಿಳಿಸಿದ ಮೇರೆಗೆ ಫಸ್ಟ್ ಸುದ್ದಿಯೊಂದಿಗೆ ದೂರವಾಣಿಯ ಮುಖಾಂತರ ಮಾತನಾಡಿದ ಆಡಳಿತಾಧಿಕಾರಿ ಡಾ|| ಅಶ್ವತ್‍ಬಾಬು ಅವರು ನಮ್ಮ ಆಸ್ಪತ್ರೆಯಲ್ಲಿ ಇತ್ತೀಚಿಗೆ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಸ್ವಲ್ಪ ಅಡಚಣೆ ಉಂಟಾಗಿದೆ. ಇದನ್ನು ನಾವು ಆದಷ್ಪು ಬೇಗ ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ. ಇದರ ಕುರಿತು ಈಗಾಗಲೇ ಆಕ್ಷನ್ ಪ್ಲಾನ್ ಸಿದ್ದಪಡಿಸಿದ್ದು, ಇನ್ನು 15 ದಿನಗಳೊಳಗಾಗಿ ಅದನ್ನು ಸರಿಪಡಿಸುತ್ತೇವೆ ಎಂದರು.
ಇತ್ತೀಚಿಗೆ ಈ ಆಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭವಾದ ಡಯಲಿಸಿಸ್ ಘಟಕಕ್ಕೆ ಪ್ರಸ್ತುತ ರೋಗಿಗಳನುಸಾರ ಸರಾಸರಿ ಸುಮಾರು 5000 ಲೀಟರ್ ಶುದ್ದ ನೀರು ಕೇವಲ ಡಯಲಿಸಿಸ್ ಘಟಕಕ್ಕೆ ಬೇಕಾಗಿದ್ದು, ಅದರಂತೆ ನಮ್ಮ ಆಸ್ಪತ್ರೆಯ ಇತರೇ ಕಾರ್ಯಗಳಿಗೂ ನೀರಿನ ಅಗತ್ಯ ಅತ್ಯಮೂಲ್ಯವಾಗಿದ್ದು, ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ನಾವು ಈಗಾಗಲೇ ಮಾನ್ಯ ಶಾಸಕರು ಹಾಗು ಅಧ್ಯಕ್ಷರು ಆರೋಗ್ಯ ಸಮಿತಿ ಮೂಡಿಗೆರೆ ಇವರ ಸಮ್ಮುಖದಲ್ಲಿ ಸಭೆಯನ್ನು ಕರೆದು ಇಲ್ಲಿನ ಜಲ್ವಂತ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ಡಯಲಿಸಿಸ್ ಘಟಕದ ಉಪಯೋಗಕ್ಕೆ ಬೇರೆಯದೇ ಆದ ಒಂದು ಹೊಸದಾದ ಕೊಳವೇ ಬಾವಿ ಕೊರೆಸಲು ಮನವಿ ಮಾಡಿರುತ್ತೇವೆ. ಇದೀಗ ಪ್ರಸ್ತುತ ಇದರ ನಿರ್ವಹಣೆಗೆ ಸುಮಾರು 4000 ಲೀಟರ್ ಶುದ್ದ ನೀರು ಬೇಕಾಗಿದ್ದು, ಇದರ ಉಪಯೋಗದ ನಂತರ ಆ ನೀರನ್ನು ಮರು ಶುದ್ದೀಕರಿಸಿ ಆಸ್ಪತ್ರೆಯ ಶೌಚಾಲಯ ಸೇರಿದಂತೆ ಇತರೇ ಕೆಲಸಗಳಿಗೆ ಮರು ಉಪಯೋಗಕ್ಕೆ ಮಾಡುತ್ತಿರುತ್ತೇವೆ ಎಂದರು.
ಡಯಲಿಸಿಸ್ ಘಟಕದ ನಿರ್ವಹಣೆಯನ್ನು ಮಾಡುವ ಸಿಬ್ಬಂದಿಯೊಬ್ಬರು ಫಸ್ಟ್ ಸುದ್ದಿಗೆ ಮಾಹಿತಿ ನೀಡಿ ನಮಗೆ ಇತ್ತೀಚಿಗೆ ಡಯಲಿಸಿಸ್ಗೆ ನೀರಿನ ಕೊರತೆ ಕಾಣಿಸಿಕೊಂಡಿದ್ದು, ಇದರಿಂದ ಸಂಪೂರ್ಣವಾಗಿ ಪರಿಪೂರ್ಣ ಡಯಲಿಸಿಸ್ ಕಾರ್ಯ ಮಾಡಲು ಆಗುವುದಿಲ್ಲ ಇದರಿಂದ ರೋಗಿಗೆ ಯಾವುದೇ ಉಪಯೋಗವಿಲ್ಲ ಒಂದು ರೋಗಿಗೆ ಒಂದು ಡಯಲಿಸಿಸ್ ಮಾಡಲು ಕನಿಷ್ಟ 3 ತಾಸು ಸಮಯ ತೆಗೆದು ಕೊಳ್ಳುವುದರಿಂದ ಇದು ಇತ್ತೀಚಿಗೆ ನೀರಿನ ಕೊರೆತೆಯಿಂದ ಇನ್ನೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಇದರಿಂದ ರೋಗಿಗೆ ಯಾವುದೇ ಪ್ರಯೋಜನವಿಲ್ಲ ಮತ್ತು ಇಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸುವುದರಿಂದ ಜನರೇಟರ್ ಅಗತ್ಯವಿದ್ದು, ಅದು ಸಹ ಅದರ ಸ್ಥಳಕ್ಕೆ ಹೋಗಿ ಚಾಲನೆಮಾಡಿ ಬರುವಷ್ಟರಲ್ಲಿ ಇದರ ಬ್ಯಾಕಪ್ ಮುಗಿದು ಕೆಲವು ಬಾರಿ ನಿಷ್ಕ್ರಿಯವಾದ ಉದಾಹರಣೆಗಳಿವೆ ನಂತರ ನಾವು ಮತ್ತೆ ಅದನ್ನು ಚಾಲನೆ ಮಾಡಿ ಕಾರ್ಯವನ್ನು ಪೂರ್ತಿಗೊಳಿಸಬೇಕಾಗುವುದರಿಂದ ನಮ್ಮ ಘಟಕಕ್ಕೆ ಬೇರೆಯದೇ ಸ್ವಯಂಚಾಲಿತ ಜನರೇಟರನ್ನು ಅಳವಡಿಸಿಕೊಟ್ಟಲ್ಲಿ ನಮ್ಮ ಕೆಲಸಕ್ಕೂ ಸಹಕಾರಿಯಾಗಲಿದೆ ಎಂದರು.
ಈ ಕುರಿತು ಫಸ್ಟ್ ಸುದ್ದಿಗೆ ಮಾಹಿತಿ ನೀಡುತ್ತಿದ್ದ ಕಛೇರಿ ಅಧೀಕ್ಷಕರಾದ ಮಂಜುಳ ಬಿ.ಎನ್. ಅವರು ವಿಷಯದ ಗಂಭೀರತೆಯನ್ನು ಅರಿತು ಆಸ್ಪತ್ರೆಯಲ್ಲಿ ಈಗಾಗಲೇ ಇರುವ ಕೊಳವೇ ಭಾವಿಯ ವಿದ್ಯುಚ್ಚಕ್ತಿ ಹಾಳಾಗಿದ್ದು ಅದನ್ನು ಕೂಡಲೇ ಯಾವುದೇ ಸಬೂಬನ್ನು ಹೇಳದೆ ಸರಿಪಡಿಸಿಕೊಡಬೇಕು ಎಂದು ಫೋನಿನ ಮುಖಾಂತರ ಸಂಬಂಧಿಸಿದ ಗುತ್ತಿಗೆದಾರರಿಗೆ ತಿಳಿಸಿದ ಮೇರೆಗೆ ಅವರು ಅದಕ್ಕೆ ಸ್ಪಂದಿಸಿ ಇನ್ನು ಎರಡು ದಿನಗಳೊಳಗಾಗಿ ಅದನ್ನು ದುರಸ್ಥಿಪಡಿಸಿಕೊಡುವ ಭರವಸೆಯನ್ನು ನೀಡಿದರು. ಸ್ಥಳದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದಂತಹ ಸುಂದ್ರೇಶ್, ಸಮಾಜ ಸೇವಕರಾದ ಅಬ್ದುಲ್ ರೆಹಮಾನ್, ಆದರ್ಶ ಹಾಗು ಇನ್ನಿತರರಿದ್ದರು.