ಬೆಂಗಳೂರು : ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಯಾರಪ್ಪ ಅವನು? ನಿನ್ನೆ ಮೊನ್ನೆ ಬಂದ ಅವನಿಗೆ ಏನು ಗೊತ್ತಿದೆ ಎಂದು ವಿಜಯೇಂದ್ರ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಶಃ ವಿಜಯೇಂದ್ರನ ಬೊಕ್ಕಸ ಖಾಲಿಯಾಗಿರಬೇಕು. ಅದನ್ನು ತುಂಬಿಸಿಕೊಳ್ಳಲು ಅವರು ಓಡಾಡುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವನಿಗೆ ಅಷ್ಟು ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಅವನಿಗೆ ಹಣವನ್ನು ಲಪಟಾಯಿಸುವುದು ಮಾತ್ರ ಗೊತ್ತಿರುವುದು ಎಂದರು. ಇದೇ ವೇಳೆ ನೆರೆಯಿಂದ ಉಂಟಾಗಿರುವ ಬೆಳೆಹಾನಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂಬ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಯಿಸಿದ್ದು, ಬಿ.ಎಸ್. ಯಡಿಯೂರಪ್ಪ ಅವರು ನೆರೆ ಪರಿಹಾರ ನೀಡಲು ಸರ್ಕಾರದ ಬೊಕ್ಕಸಾ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಖಾಲಿಯಾಗಿರುವುದು ಅವರ ಕುಟುಂಬದ ಬೊಕ್ಕಸನಾ? ಅಥವಾ ಸರ್ಕಾರದ ಬೊಕ್ಕಸನಾ? ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಲಿ. ನಾನು ಕೂಡಾ ಮುಖ್ಯಮಂತ್ರಿಯಾಗಿದ್ದವನು ಸರ್ಕಾರದ ಬೊಕ್ಕಸ ಸಂಪದ್ಭರಿತವಾಗಿದೆ. ನೆರೆ ಪರಿಹಾರದ ವಿಚಾರವಾಗಿ ಕೇಂದ್ರದ ಮುಲಾಜಿಗೆ ಒಳಗಾಗುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರವೇ ಸಹಾಯ ಮಾಡಬಹುದಾಗಿದೆ. ಇದಕ್ಕೆ ಆರ್ಥಿಕ ತೊಂದರೆ ಇಲ್ಲ ಎಂದು ಹೇಳಿದರು.










