ಬೆಂಗಳೂರು : ಇದು ಆರಂಭ ಅಷ್ಟೇ, ಅಂತ್ಯ ಅಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಮೆರವಣಿಗೆ ವೇಳೆ ಸಾದಹಳ್ಳಿ ಗೇಟ್ ಬಳಿ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಗಲು ರಾತ್ರಿ ನನಗೋಸ್ಕರ ಹೋರಾಟ ಮಾಡಿ, ಪೂಜೆ ಸಲ್ಲಿಸಿದ ನಿಮಗೆ ಅಭಿನಂದನೆಗಳು. ಕಾಂಗ್ರೆಸ್‍ನ ಪ್ರಾಮಾಣಿಕ ಕಾರ್ಯಕರ್ತನಾದ ನನ್ನ ಮೇಲೆ ಆದ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೀರಿ ಎಂದು ಕೈಮುಗಿದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಇದು ಒಂದು ದಿನಕ್ಕೆ ಮುಗಿಯುವ ಅಧ್ಯಾಯವಲ್ಲ. ಇದು ಕೇವಲ ಆರಂಭ ಅಷ್ಟೇ, ಅಂತ್ಯವಲ್ಲ. ನಾನು ಯಾರಿಂದಲೂ ಲಂಚ ಪಡೆದಿಲ್ಲ. ಯಾರಿಗೂ ಹೆದರುವ ಅಗತ್ಯವಿಲ್ಲ. ನನ್ನನ್ನು ಜೈಲಿನಲ್ಲಿ ಇರಿಸಿದ್ದಕ್ಕೆ ನಾನು ಎದೆ ಗುಂದಲಿಲ್ಲ. ನಾನು ಒಂದು ಕುಟುಂಬದ ಆಸ್ತಿಯಲ್ಲ. ನಿಮ್ಮೆಲ್ಲರ ಕುಟುಂಬದ ಆಸ್ತಿ. ನಿಮ್ಮ ಹೆಸರಿಗೆ ಧಕ್ಕೆ ಬರದಂತೆ ಜೀವನ ನಡೆಸುತ್ತೇನೆ. ತಾಯಿ, ಮಗಳು ಸೇರಿದಂತೆ ನೂರಕ್ಕೂ ಅಧಿಕ ಸ್ನೇಹಿತರು ಹಾಗೂ ಬಂಧುಗಳಿಗೆ ಕಿರುಕುಳ ಕೊಟ್ಟಿದ್ದನ್ನು ನೀವು ನೋಡಿದ್ದೀರಿ. ನನ್ನ ಮಗಳನ್ನು ನಿಮ್ಮ ಮಗಳು ಎಂಬ ಕಾಳಜಿ ತೋರಿದ್ರಿ. ಸಂಕಷ್ಟದ ವೇಳೆ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ಕನ್ನಡಪರ ಸಂಘಟನೆಗಳು, ನನ್ನ ಅಭಿಮಾನಿಗಳು ಪ್ರತಿಭಟನೆ ನಡೆಸಿ ಬಿಡುಗಡೆಗೆ ಒತ್ತಾಯಿಸಿದರು. ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದರು.










